Advertisement

ಶ್ವಾಸಕೋಶ ರೋಗಿಗಳಲ್ಲಿ ಕೋವಿಡ್ ನಂತರದ ಸಂಕೀರ್ಣ ಸಮಸ್ಯೆಗಳು

02:49 PM Oct 25, 2020 | Suhan S |

ಕೋವಿಡ್ ಸಾಂಕ್ರಾಮಿಕೋತ್ತರ ಹಂತವನ್ನು ಪ್ರವೇಶಿಸುತ್ತಿರುವಾಗ, ಕೋವಿಡ್‌-19ನಿಂದ ಚೇತರಿಸಿಕೊಂಡ ರೋಗಿಗಳು ರೋಗಲಕ್ಷಣಗಳು ಮರುಕಳಿಸುವ ಅಥವಾ ಹಾಗೆಯೇ ಉಳಿದುಕೊಂಡ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶವನ್ನು ಗಮನಿಸಬಹುದು.

Advertisement

ಇವುಗಳಲ್ಲಿ ಶ್ವಾಸಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು, ಇತರ ಸಮಸ್ಯೆಗಳೂ ಇರಬಹುದು. ಶ್ವಾಸಾಂಗಕ್ಕೆ ಸಂಬಂಧಿಸದ ಸಮಸ್ಯೆಗಳಲ್ಲಿ ಕೊರೊನಾದಿಂದ ಮಾನಸಿಕ ಆರೋಗ್ಯದ ಮೇಲೆ ಉಂಟಾದ ಪ್ರತಿಕೂಲ ಪರಿಣಾಮಗಳಿಂದಾಗಿ ದಣಿವು, ಮಯಾಲ್ಜಿಯಾ, ಮಲೈಸ್‌ ಮತ್ತು ಅನೊರೆಕ್ಸಿಯಾ ಕಂಡುಬರುತ್ತವೆ. ಇವು ತನ್ನಿಂದ ತಾನಾಗಿಯೇ ಕಡಿಮೆಯಾಗಬಲ್ಲಂಥವು ಮತ್ತು ಕಾಲಾಂತರದಲ್ಲಿ ಸರಿಹೋಗುತ್ತವೆ.

ಕೋವಿಡ್‌ಗೆ ತುತ್ತಾದ ರೋಗಿಗಳಲ್ಲಿ ಶ್ವಾಸಾಂಗಕ್ಕೆ ಸಂಬಂಧಪಟ್ಟು ಸ್ಥೂಲವಾಗಿ ಎರಡು ವಿಧವಾದ ಲಕ್ಷಣಗಳನ್ನು ಗಮನಿಸಬಹುದು. ಒಂದನೆಯದು ಸೋಂಕಿನ ಬಳಿಕ ಶ್ವಾಸನಾಳದ ಅತಿಯಾದ ಪ್ರತಿಸ್ಪಂದನೆ. ಯಾವುದೇ ವೈರಾಣು ಸೋಂಕು ಶ್ವಾಸನಾಳದಲ್ಲಿರುವ ಲೋಳೆಯಾದ ಮ್ಯುಕೋಸಾದಲ್ಲಿ ಸತತ ಉರಿಯೂತವನ್ನು ಉಂಟುಮಾಡುತ್ತದೆ. ಇದಕ್ಕೆ ಕೊರೊನಾ ವೈರಾಣು ಕೂಡ ಹೊರತಲ್ಲ. ಇದು ಒಣಕೆಮ್ಮು, ಉಸಿರುಕಟ್ಟುವಿಕೆ, ಎದೆಯಲ್ಲಿ ಅಸ್ವಾಸ್ಥ್ಯ ಮತ್ತು ಉಸಿರಾಡುವಾಗ ಕೀರಲು ಧ್ವನಿ ಹೊಮ್ಮುವಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲರ್ಜಿಯ ತೊಂದರೆ ಹೊಂದಿರುವವರಲ್ಲಿ ಈ ಲಕ್ಷಣಗಳು ದೀರ್ಘ‌ಕಾಲದವರೆಗೆ ಇರುತ್ತವೆ. ಕೆಲವು ರೋಗಿಗಳಲ್ಲಿ ಮಾತ್ರ ಈ ಲಕ್ಷಣಗಳು ಹಾಗೆಯೇ ಉಳಿದುಕೊಳ್ಳುತ್ತವಾದರೆ ಬಹುತೇಕರಲ್ಲಿ ತಾನಾಗಿ ಅಥವಾ ಔಷಧ ಉಪಚಾರದಿಂದ ಸ್ವಲ್ಪ ಸಮಯದ ಬಳಿಕ ಮಾಯವಾಗುತ್ತವೆ.

ಎರಡನೆಯದಾಗಿ, ಕೆಲವು ರೋಗಿಗಳು ಶ್ವಾಸಕೋಶವು ಪೆಡಸಾಗುವ (ಲಂಗ್‌ ಫೈಬ್ರೋಸಿಸ್‌) ಸಮಸ್ಯೆಗೆ ತುತ್ತಾಗುತ್ತಾರೆ. ಇದು ಉಸಿರುಗಟ್ಟುವ ತೊಂದರೆಯು ಶಾಶ್ವತವಾಗಿ ಉಳಿದುಕೊಳ್ಳುವ ಸ್ಥಿತಿಗೆ ಕಾರಣವಾಗಬಹುದಾದ್ದರಿಂದ ಕಳವಳಕಾರಿಯಾಗಿದೆ. ಈ ಸಮಸ್ಯೆಯು ಅಪರೂಪವಾದುದು ಮತ್ತು ಕೋವಿಡ್‌ನಿಂದಾಗಿ ತೀವ್ರ ತರಹದ ನ್ಯುಮೋನಿಯಾಕ್ಕೆ ತುತ್ತಾದ ವರ್ಗದ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ರೋಗಿಗಳು ನಿಯಮಿತವಾಗಿ ಶ್ವಾಸಾಂಗ ತಜ್ಞರನ್ನು ಭೇಟಿಯಾಗುವುದು ಹಾಗೂ ನಿಯಮಿತವಾಗಿ ಶ್ವಾಸಕೋಶಗಳ ಕಾರ್ಯಚಟುವಟಿಕೆಗಳ ಪರಿಶೀಲನೆಗೆ ಒಳಪಡುವುದು ಮತ್ತು ನಿರ್ದಿಷ್ಟ ಚಿಕಿತ್ಸೆ ಆರಂಭಿಸುವುದು ಅಗತ್ಯವಾಗಿರುತ್ತದೆ.

ಕೋವಿಡ್ ಬಳಿಕ ಶ್ವಾಸಕೋಶವು ಗುಣಮುಖವಾಗುವುದಕ್ಕೆ ಸಾಕಷ್ಟು ಕಾಲ ತೆಗೆದುಕೊಳ್ಳುತ್ತದೆ ಯಾದ್ದರಿಂದ ಶ್ವಾಸಕೋಶಗಳಿಗೆ ಮತ್ತೆ ಸೋಂಕು ತಗಲುವುದನ್ನು ತಡೆಯುವುದಕ್ಕಾಗಿ ಮತ್ತು ಶ್ವಾಸಕೋಶಗಳ ಬಲವರ್ಧನೆಗಾಗಿ ಶ್ವಾಸಕೋಶ ರಕ್ಷಕ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವುದು ಉತ್ತಮ.

Advertisement

ಅಸ್ತಮಾ, ಸಿಒಪಿಡಿಯಂತಹ ದೀರ್ಘ‌ಕಾಲಿಕ ಶ್ವಾಸಕೋಶ ಸಮಸ್ಯೆಗಳು ಮತ್ತು ಇನ್ನಿತರ ಸಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಹಿರಿಯ ರೋಗಿಗಳು ಕೊರೊನೋತ್ತರ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಹೆಚ್ಚು ಜನಸಂದಣಿ ಇರುವಲ್ಲಿಗೆ, ಗಾಳಿಯಾಟ ಕಡಿಮೆ ಇರುವ ಸ್ಥಳಗಳಿಗೆ ಹೋಗದೆ ಇರುವುದು, ಎಸಿ ಹಾಕಿರುವ ಒಳಾಂಗಣಗಳಲ್ಲಿ ದೀರ್ಘ‌ಕಾಲ ಇರುವುದನ್ನು ತಪ್ಪಿಸುವುದರಿಂದ ಮರಳಿ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಬಹುದು.

ಜ್ವರ, ಕಫ‌ದ ಬಣ್ಣ ಬದಲಾವಣೆ, ಕಫ‌ ಹೆಚ್ಚುವುದು ಮತ್ತು ಉಸಿರಾಟಕ್ಕೆ ಸಮಸ್ಯೆಯಾಗುವುದು ದ್ವಿತೀಯಕ ಸೋಂಕಿನ ಲಕ್ಷಣಗಳಾಗಿರುತ್ತವೆ. ಕೊರೊನೋತ್ತರ ಶ್ವಾಸಕೋಶ ಪೆಡಸಾಗುವ ಸಮಸ್ಯೆ ಹೊಂದಿರುವ ರೋಗಿಗಳು ಇಂತಹ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗನೆ ವೈದ್ಯಕೀಯ ನೆರವು ಪಡೆಯುವುದು ಅಗತ್ಯವಾಗಿರುತ್ತದೆ.

 

ಡಾ| ವಿಶಾಖ್‌ ಆಚಾರ್ಯ

ಕನ್ಸಲ್ಟಂಟ್‌ ಪಲ್ಮನರಿ ಮೆಡಿಸಿನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next