ಗದಗ: ಇಲ್ಲಿನ ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರಾತ್ರಿಯಿಂದ ನೂರಾರು ವಿದ್ಯಾರ್ಥಿಗಳು ಆಹಾರ ತ್ಯಜಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲ ತಿಂಗಳಿಂದ ಕಳಪೆ ಆಹಾರ, ಕಲುಷಿತ ನೀರು ಪೂರೈಸಲಾಗುತ್ತಿದೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಇದೀಗ ಊಟ ತ್ಯಜಿಸಿ ಪ್ರತಿಭಟನೆ ಹಾದಿ ತುಳಿದಿದ್ದಾರೆ.
ವಾರ್ಷಿಕ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಈ ನಡೆ ಹೆತ್ತವರಲ್ಲಿ ಆತಂಕ ಮೂಡಿಸಿದೆ. ಮೊರಾರ್ಜಿ ದೇಸಾಯಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ವರ್ಷದ 77 ಹಾಗೂ ದ್ವಿತೀಯ ವರ್ಷದ 63 ಸೇರಿ ಒಟ್ಟು 140 ವಿದ್ಯಾರ್ಥಿಗಳಿದ್ದಾರೆ. ಕೆಲ ತಿಂಗಳಿಂದ ಕಳಪೆ ಆಹಾರ ಪೂರೈಸುತ್ತಿದ್ದು, ವಾರದಲ್ಲಿ ನಾಲ್ಕಾರು ವಿದ್ಯಾರ್ಥಿಗಳು ಅಸ್ವಸ್ಥರಾಗಿ, ಆಸ್ಪತ್ರೆ ಸೇರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಧಿಕಾರಿಗಳ ಭೇಟಿ: ವಿದ್ಯಾರ್ಥಿಗಳು ಊಟ ತ್ಯಜಿಸಿರುವ ಸುದ್ದಿ ತಿಳಿದ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ವರಗಪ್ಪನವರ ಸ್ಥಳಕ್ಕೆ ಭೇಟಿ ನೀಡಿ, ಪ್ರಭಾರಿ ವಾರ್ಡನ್ ಸಿದಟಛಿಲಿಂಗೇಶ ಪಟ್ಟಣಶೆಟ್ಟಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಬಳಿಕ ಪ್ರತಿಭಟನಾ ನಿರತ
ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.