ವೇಣೂರು: ಆರಂಬೋಡಿಯ ಪೂಂಜ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ ತಡರಾತ್ರಿ ಕಳ್ಳರು ನುಗ್ಗಿದ್ದು, ಕಾಣಿಕೆ ಡಬ್ಬಿಯಲ್ಲಿದ್ದ ಹಣ ದೋಚಿದ್ದಾರೆ. ರವಿವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕ ಕೃಷ್ಣಪ್ರಸಾದ್ ಅವರು ಪೂಜೆಗೆಂದು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಶನಿವಾರ ರಾತ್ರಿ 7 ಗಂಟೆಗೆ ಪೂಜೆ ಮುಗಿಸಿ ಅರ್ಚಕರು ಬಾಗಿಲು ಹಾಕಿ ತೆರಳಿದ್ದು, ಬೆಳಗ್ಗೆ ಅರ್ಚಕರು ಬಂದು ಗಮನಿಸಿದಾಗ ಬಾಗಿಲಿನಲ್ಲಿ ಬೀಗ ಇರಲಿಲ್ಲ. ಬಾಗಿಲಿನ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಅರ್ಚಕರು ಒಳಗೆ ಪ್ರವೇಶಿಸಿದಾಗ ಗರ್ಭಗುಡಿಯ ಮುಂಭಾಗದ ಬƒಹದಾಕಾರದ ಕಾಣಿಕೆ ಹುಂಡಿಯ ಬೀಗ ಮುರಿದು ಹಣವನ್ನು ಕದ್ದೊಯ್ದಿರುವುದು ಕಂಡು ಬಂದಿದೆ. ಸುಮಾರು 4 ಸಾವಿರರೂ. ಚಿಲ್ಲರೆ ಹಣ ಹುಂಡಿಯಲ್ಲೇ ಇದ್ದು, ಕೇವಲ ನೋಟು ಹಾಗೂ ಹರಕೆ ರೂಪದಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾರೆಂದು ತಿಳಿದು ಬಂದಿದೆ. ಸುಮಾರು ಐದಾರು ವರ್ಷಗಳ ಹಿಂದೆ ಸ್ಥಳೀಯ ಕಳ್ಳರೇ ಈ ದೇವಸ್ಥಾನಕ್ಕೆ ನುಗ್ಗಿದ್ದು, ಬಳಿಕ ಪತ್ತೆಯಾಗಿದ್ದರು. ದೇವಸ್ಥಾನದ ಸುತ್ತ 8 ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, ಸಿಸಿಟಿವಿ ತಿರುಗಿಸಿ ಕಳ್ಳರುಕಳವು ಮಾಡಿದ್ದಾರೆ. ಎರಡು ಸಿಸಿಟಿವಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಾಣಿಕೆ ಡಬ್ಬಿಯಿಂದ ಸುಮಾರು 7 ಸಾವಿರರೂ. ಹಾಗೂ 8 ಸಾವಿರ ರೂ. ಮೌಲ್ಯದ ಸಿಸಿಟಿವಿ ಕದ್ದೊಯ್ದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.