ಕಲಬುರಗಿ: ವಿದ್ಯಾರ್ಥಿಗಳ ಕಲಿಕೆ ಬಳಿಕ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅಂತಹ ಸಾಮರ್ಥ್ಯ ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಸರಕಾರಿ ಪಾಲಿಟೆಕ್ನಿಕ್‌ಗಳು 2020ರೊಳಗೆ ಎನ್‌ಬಿಎ (ರಾಷ್ಟ್ರೀಯ ಮಾನ್ಯತಾ ಮಂಡಳಿ) ಸದಸ್ಯತ್ವ ಪಡೆಯಬೇಕು ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ರಶ್ಮಿ ಹೇಳಿದರು.
ಇಲ್ಲಿನ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಸರ್ಕಾರಿ ಪಾಲಿಟೆಕ್ನಿಕ್‌ನ ಬೋಧನಾ ಮಾನ್ಯತೆ ಪಡೆದ ಉಪನ್ಯಾಸಕರು ಎನ್ನುವ ವಿಷಯದ ಮೇಲೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡಿದರು. ಇಂತಹ ಸದಸ್ಯತ್ವಗಳು, ಸಂಸ್ಥೆಯ ಗುಣಮಟ್ಟ ವರ್ಧನೆ ಉಪಕ್ರಮಗಳ ಹೆಚ್ಚುವಿಕೆಗೆ ಪ್ರೋತ್ಸಾಹಿಸುತ್ತವೆ.
ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಗುಣಮಟ್ಟ, ಪ್ರಮಾಣ ಎರಡನ್ನು ಸುಧಾರಿಸುತ್ತವೆ. ಪಾಸಾಗುವ ವಿದ್ಯಾರ್ಥಿಗಳ ಉದ್ಯೋಗವಕಾಶಗಳು ಹೆಚ್ಚಾಗುತ್ತದೆ. ಅಲ್ಲದೆ, ಸಂಸ್ಥೆಗೆ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧನ ಸಹಾಯ ದೊರಕುತ್ತದೆ ಎಂದರು.
ಇದಕ್ಕೂ ಮುನ್ನ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಯೋಜನಾ ಸೌಲಭ್ಯಗಳ ಘಟಕದ (ಸ್ಟೇಟ್ ಪ್ರೊಜೆಕ್ಟ್ ಫೆಸಿಲಿಟೇಶನ್ ಯೂನಿಟ್) ವಿಶೇಷ ಅಧಿಕಾರಿ ಪ್ರೊ| ಮನೋಹರ ನಾಯಕ ಮಾತನಾಡಿ, ಕಾಲೇಜುಗಳು ಕಾಲಹರಣ ಮಾಡದೆ, ಕೂಡಲೇ ಎನ್‌ಬಿಎ ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಬೇಕು.
ಇದರಿಂದ ಸಂಸ್ಥೆಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಸತೀಶ ಹುದ್ದಾರ, ಎಚ್‌ಕೆಇ ಸಂಸ್ಥೆ ಉಪಾಧ್ಯಕ್ಷ ಸೂರ್ಯಕಾಂತ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್.ಆವಂತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ಸಂಚಾಲಕರಾದ ಡಾ| ಮಹಾದೇವಪ್ಪ ಗಾದಗೆ, ಡಾ| ಎಸ್.ಬಿ.ಪಾಟೀಲ, ವಾಸು, ಗುರು ಹೂಗಾರ ಹಾಜರಿದ್ದರು.
ಕಾಲೇಜಿನ ಡಾ| ಶ್ರೀದೇವಿ ಸೋಮಾ ನಿರೂಪಿಸಿದರು. ಡಾ| ಮಲ್ಲಿಕಾರ್ಜುನ ವಡ್ಡನಕೇರಿ ಪ್ರಾರ್ಥನಾಗೀತೆ ಹಾಡಿದರು. ಡಾ| ಮಹಾದೇವಪ್ಪ ಗಾದಗೆ ಸ್ವಾಗತಿಸಿದರು. ಡಾ| ಎಸ್.ಬಿ. ಪಾಟೀಲ ವಂದಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಸಿದ್ದರಾಮ ಆರ್.ಪಾಟೀಲ, ಡಾ| ಎ.ಬಿ. ಹರವಾಳಕರ, ಡಾ| ಓಂಪ್ರಕಾಶ ಹೆಬ್ಟಾಳ, ಪ್ರೊ| ಅವಿನಾಶ ಸಾಂಬ್ರಾಣಿ, ಡಾ| ಬಾಬುರಾವ ಶೇರಿಕಾರ ಹಾಜರಿದ್ದರು.