Advertisement

Employment Opportunity; ಸರಕಾರಿ ಪದವಿ ಕಾಲೇಜಲ್ಲಿ ‘ಉದ್ಯೋಗಾವಕಾಶ’ ಕೋರ್ಸ್‌

11:22 PM Nov 11, 2024 | Team Udayavani |

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣದಲ್ಲಿ ಅಲ್ಪಾವಧಿ ಕೋರ್ಸ್‌ಗಳನ್ನು ಅದರಲ್ಲಿಯೂ ವಿಶೇಷವಾಗಿ ಹೆಚ್ಚು ಉದ್ಯೋಗಾವಕಾಶ ಇರುವ ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೋರ್ಸ್‌ಗಳನ್ನು ಪರಿಚಯಿಸುವ ಮೂಲಕ ರಾಜ್ಯದ ಪದವಿ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಅವಕಾಶವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಬಹುರಾಷ್ಟ್ರೀಯ ಕಂಪೆನಿಯಾದ ಸಿಸ್ಕೋ ಮತ್ತು ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿಯ (ಕಿಟ್ಸ್‌) ಸಹಭಾಗಿತ್ವದಲ್ಲಿ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೈಬರ್‌ ಸುರಕ್ಷೆ ಕೌಶಲ ಮತ್ತು ಸೈಬರ್‌ ಸುರಕ್ಷೆ’ ಆನ್‌ಲೈನ್‌ ತರಬೇತಿ ಮತ್ತು ಆಯ್ದ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಬಹುರಾಷ್ಟ್ರೀಯ ಕಂಪೆನಿ ಡೆಲ್‌ ಟೆಕ್ನಾಲಜೀಸ್‌ ನೆರವಿನೊಂದಿಗೆ ಮಹಿಳೆ ಮತ್ತು ಕೃತಕ ಬುದ್ಧಿಮತ್ತೆ’ ಕೋರ್ಸ್‌ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಈ ಕೋರ್ಸ್‌ಗಳು ಉಚಿತವಾಗಿರಲಿವೆ.

30 ಗಂಟೆಯ ತರಬೇತಿ
ಸಿಸ್ಕೋ ಸಹಯೋಗದೊಂದಿಗೆ ಆರಂಭಿಸಲಿರುವ ಸೈಬರ್‌ ಸಂಬಂಧಿತ ಕೋರ್ಸ್‌ಗಳು ರಾಜ್ಯಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾರಿಗೆ ಬರಲಿದೆ. ಇದರಲ್ಲಿ 2 ವಿಧ. ಸೈಬರ್‌ ಸುರಕ್ಷೆ ಅಗತ್ಯಗಳು ವಿಷಯದ ಬಗ್ಗೆ 30 ಗಂಟೆಯ ತರಬೇತಿ ಇರುತ್ತದೆ. ಇದರಲ್ಲಿ ಪದವೀಧರರು ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಸ್ವತ್ತುಗಳ ರಕ್ಷಣೆಗೆ ಅಗತ್ಯವಾದ ಮೂಲಭೂತ ಸೈಬರ್‌ ಸುರಕ್ಷತಾ ಜ್ಞಾನವನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಸೈಬರ್‌ ಭದ್ರತೆಯ ಪರಿಚಯ ಕೋರ್ಸ್‌ 15 ಗಂಟೆಗಳ ಕೋರ್ಸ್‌ ಆಗಿರುತ್ತದೆ.
ತಂತ್ರಜ್ಞಾನ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳಿಗೆ “ಸೈಬರ್‌ ಭದ್ರತೆಯ ಪರಿಚಯ’ ಕೋರ್ಸ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ‘ಸೈಬರ್‌ ಸುರಕ್ಷೆಯ ಅಗತ್ಯಗಳು’ ವಿಷಯ ಹೆಚ್ಚು ಸೂಕ್ತ ಎಂದು ಉನ್ನತ ಶಿಕ್ಷಣ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖೀಸಿದೆ. ಆದಾಗ್ಯೂ ವಿದ್ಯಾರ್ಥಿಗಳು ಈ ಎರಡರಲ್ಲಿ ತಮಗಿಷ್ಟವಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ಆಸಕ್ತ ಪ್ರಾಧ್ಯಾಪಕರು ಸಹ ಈ ಕೋರ್ಸ್‌ಗೆ ಸೇರಿಕೊಳ್ಳಬಹುದು.

ವಿದ್ಯಾರ್ಥಿನಿಯರಿಗೆ ಕೃತಕ ಬುದ್ಧಿಮತ್ತೆ ಕೋರ್ಸ್‌
ಡೆಲ್‌ ಟೆಕ್ನಾಲಜೀಸ್‌ನ ಸಹಕಾರದೊಂದಿಗೆ ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಆಯ್ದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ “ಮಹಿಳೆ ಮತ್ತು ಕೃತಕ ಬುದ್ಧಿಮತ್ತೆ’ ಕಾರ್ಯಕ್ರಮವನ್ನು ಈ ವರ್ಷ ಪರಿಚಯಿಸಲಾಗುತ್ತಿದೆ. ಈ ವರ್ಷ ಈ ಜಿಲ್ಲೆಗಳ 17 ಕಾಲೇಜಿನಲ್ಲಿ ಕಾರ್ಯಕ್ರಮ ಜಾರಿಗೆ ಬರಲಿದೆ.ಪದವಿ ಓದುತ್ತಿರುವ ವಿದ್ಯಾರ್ಥಿನಿಯರು ಈ ಕೋರ್ಸ್‌ ನೋಂದಾಯಿಸಿಕೊಳ್ಳಬಹುದು. ಇದು 20 ಗಂಟೆಯ ಆಫ್ಲೈನ್‌ ಕಾರ್ಯಕ್ರಮ. 7 ಗಂಟೆ ಅವಧಿಯ ಪ್ರಾಥಮಿಕ ದತ್ತಾಂಶ ಮತ್ತು ವಿಶ್ಲೇಷಣೆ, 8 ಗಂಟೆ ಅವಧಿಯ ಕೃತಕ ಬುದ್ಧಿಮತ್ತೆಯನ್ನು ಬಳಸಿ ದತ್ತಾಂಶದ ವಿಶ್ಲೇಷಣೆ ಮತ್ತು 5 ಗಂಟೆ ಅವಧಿಯ ಉದ್ಯೋಗ ಸಿದ್ಧತೆ ಕೌಶಲ ಮತ್ತು ವ್ಯಕ್ತಿತ್ವ ವಿಕಸನ ಕೌಶಲ ತರಗತಿ ಇರಲಿದೆ. ಡೆಲ್‌ ತಂತ್ರಜ್ಞಾನ ಸಂಸ್ಥೆಯ ಸಿಬಂದಿ ತರಬೇತಿ ನೀಡಲಿದ್ದಾರೆ. ಕೋರ್ಸ್‌ ಯಶಸ್ವಿಯಾಗಿ ಪೂರ್ಣಗೊಳಿಸಿವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ನೀಡಲಾಗುತ್ತದೆ.

ವಿದ್ಯಾರ್ಥಿಗಳ ಉದ್ಯೋಗಾವಕಾಶವನ್ನು ಹೆಚ್ಚಿಸಲು ನಾವು ಈ ಅಲ್ಪಾವಧಿಯ ಕೋರ್ಸ್‌ಗಳನ್ನು ಈ ವರ್ಷ ಪರಿಚಯಿಸುತ್ತಿದ್ದೇವೆ. ಪ್ರಾಂಶುಪಾಲರು ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಈ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
– ಮಂಜುಶ್ರೀ ಎನ್‌., ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

Advertisement

 ರಾಕೇಶ್‌ ಎನ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next