ಹೊಸದಿಲ್ಲಿ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಶೀಘ್ರದಲ್ಲೇ ಎನ್‌ಡಿಎ ಕೂಟ ಸೇರಲಿದೆ ಎಂಬ ಸುದ್ದಿಯನ್ನು ಸುಳ್ಳು ಎಂದಿರುವ ಪಕ್ಷ, ಇಂಡಿಯಾ ಕೂಟದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಟ್ವೀಟರ್ ಪೋಸ್ಟ್‌ನಲ್ಲಿ ಪಕ್ಷದ ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಪರವಾಗಿ ಫಲಿತಾಂಶ ಬರುವ ಬಗ್ಗೆ ಸುಳ್ಳು ಸಮೀಕ್ಷೆ ಮಾಡಿದ್ದ ಕೆಲ ಪತ್ರಕರ್ತರು ಈಗ ಶಿವಸೇನೆ (ಯುಬಿಟಿ) ಇಂಡಿಯಾ ಕೂಟ ಬಿಟ್ಟು ಎನ್‌ಡಿಎಗೆ ಸೇರುವ ಬಗ್ಗೆ ವದಂತಿ ಹರಡಿಸುತ್ತಿವೆ. ನೀವು ಅಂದುಕೊಂಡಂತೆ ಆಗುವುದಿಲ್ಲ. ಮೋಯೆ ಮೋಯೆ, ಯೇ ನಾ ಹೋಯೆ (ಇದು ಆಗುವು ದಿಲ್ಲ), ಯೂ ಕ್ಯಾನ್ ರೋಯೆ ರೋಯೆ (ಅಳಬೇಕೆನಿಸಿದರೆ ಅತ್ತುಬಿಡಿ)’ ಎಂದು ವ್ಯಂಗ್ಯವಾಡಿದ್ದಾರೆ.
ಇಂಡಿಯಾ ಕೂಟಕ್ಕೆ ಪಕ್ಷೇತರರ ಬೆಂಬಲ: ಒಟ್ಟು ಸ್ಥಾನ 233ಕ್ಕೇರಿಕೆ
ಹೊಸದಿಲ್ಲಿ: ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ಗೆದ್ದಿರುವ ವಿಶಾಲ್ ಪ್ರಕಾಶ್‌ಬಾಪು ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರೊಂದಿ ಗೆ ಇಂಡಿಯಾ ಕೂಟದ ಸಂಸದರ ಸಂಖ್ಯೆ 233ಕ್ಕೆ ಏರಿಕೆಯಾ ಗಿದೆ. ವಿಶಾಲ್ ಕಾಂಗ್ರೆಸ್ಸಿನವರೇ ಆಗಿದ್ದು, ಸೀಟು ಹಂಚಿಕೆ ವೇಳೆ ಸಾಂಗ್ಲಿ ಕ್ಷೇತ್ರವು ಉದ್ಧವ್ ಶಿವಸೇನೆಯ ಪಾಲಾಗಿತ್ತು. ಹಾಗಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ವಿಶಾಲ್, ಮಾಹಾರಾಷ್ಟ್ರದ ಮಾಜಿ ಸಿಎಂ ವಸಂತ್ ದಾದಾ ಪಾಟೀಲ್ ಅವರ ಮೊಮ್ಮಗ ಆಗಿದ್ದಾರೆ.
ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕರೆದ ಖರ್ಗೆ
ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷವು ಜೂ.8ರಂದು ಕಾರ್ಯ ಕಾರಿ ಸಮಿತಿ ಸಭೆ ಕರೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿನ ಸಾಧನೆ ಕುರಿತು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. 2019ರಲ್ಲಿ 52 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 99 ಸ್ಥಾನಗಳನ್ನು ಗೆದ್ದು 2ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.