ಬೆಂಗಳೂರು: ವೈಚಾರಿಕ ಕರ್ನಾಟಕ ನಿರ್ಮಾಣಕ್ಕೆ ನಾಡಿನ ಮಠ, ಮಂದಿರ,ಚರ್ಚ್, ಮಸೀದಿಗಳ ಜತೆಗೆ ಮೌಡ್ಯಗಳ ಮೂಟೆಗಳಂತಿರುವ ಕೆಲವು ರಾಜಕಾರಣಿಗಳು ಅಡ್ಡಿಯಾಗುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ
ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾನುವಾರ “ವೈಚಾರಿಕ ಕರ್ನಾಟಕ ನಿರ್ಮಾಣ ಚಿಂತನೆ, ಸಂಘಟನೆ ಮತ್ತು ಹೋರಾಟ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಚಾರಿಕ
ಪ್ರಜ್ಞೆ ಮೂಡಿಸಬೇಕಿದ್ದ ಮಂದಿರ, ಮಸೀದಿ, ಚರ್ಚ್‌ಗಳು ಇಂದು ಮೌಡ್ಯಗಳ ಪೋಷಣೆ, ಅಧಿಕಾರದ ಓಲೈಕೆ, ಅಧಿಕಾರದ ಬೆನ್ನುಹತ್ತಲಾರಂಭಿಸಿವೆ. ಇವುಗಳ ಜತೆಗೆ ಮೌಡ್ಯಗಳ ಮೂಟೆಗಳಂತಿರುವ ಕೆಲ ರಾಜಕಾರಣಿಗಳೂ ವೈಚಾರಿಕ ಕರ್ನಾಟಕ ನಿರ್ಮಾಣಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದರು.
ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ನಮ್ಮ ಸಚಿವರು ಮಂತ್ರಹಾಕಿ ಮಳೆತರಲು ಹೋದರೆ ಬರುತ್ತಾ? ಮೌಡ್ಯಕ್ಕೊಳಗಾಗಿರುವ ರಾಜಕಾರಣಿಗಳು ಮಧ್ಯರಾತ್ರಿ ಬೆತ್ತಲೆ ನಡೆಯಬೇಕು ಎಂದು ಮಂತ್ರವಾದಿ ಹೇಳಿದರೆ ಅದಕ್ಕೂ ಸಿದ್ಧರಾಗಿರುತ್ತಾರೆ. ವೈಚಾರಿಕ ಪ್ರಜ್ಞೆ ಇದ್ದಿದ್ದರೆ ಮೌಡ್ಯಗಳ ಮೊರೆ ಹೋಗುತ್ತಿರಲಿಲ್ಲ ಎಂದು ಮಳೆಗಾಗಿ ಪೂಜೆ ಮಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.