ಹೊಸದಿಲ್ಲಿ: ಪೋಲೆಂಡ್‌ನ ಅರ್ಲಾಮೋವ್‌ನಲ್ಲಿ ನಡೆದ “ಪೋಲಿಶ್ ಓಪನ್ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿ’ಯ ಎರಡೂ ಪ್ರಶಸ್ತಿಗಳು ಭಾರತದ ಪಾಲಾಗಿವೆ.
ಪುರುಷರ ವಿಭಾಗದಲ್ಲಿ ಕಿರಣ್ ಜಾರ್ಜ್, ವನಿತಾ ವಿಭಾಗದಲ್ಲಿ ಅನುಪಮಾ ಉಪಾಧ್ಯಾಯ ಪ್ರಶಸ್ತಿ ಎತ್ತಿದರು.
ಹಾಲಿ ಚಾಂಪಿಯನ್ ಕೂಡ ಆಗಿರುವ ಕಿರಣ್ ಜಾರ್ಜ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚಿಯ ಹೊ ಲೀ ವಿರುದ್ಧ 21-15, 21-14 ಅಂತರದ ಜಯ ಸಾಧಿಸಿದರು. ಅನುಪಮಾ ಉಪಾಧ್ಯಾಯ ಭಾರತದವರೇ ಆದ ಅದಿತಿ ಭಟ್ ವಿರುದ್ಧ 3 ಗೇಮ್‌ಗಳ ಹೋರಾಟ ನಡೆಸಿ 17-21, 21-14, 21-17ರಿಂದ ಗೆದ್ದು ಬಂದರು.
ಕಿರಣ್ ಜಾರ್ಜ್ ಪ್ರಸಕ್ತ ಋತುವಿನಲ್ಲಿ ಗೆದ್ದ 2ನೇ ಪ್ರಶಸ್ತಿ ಇದಾಗಿದೆ. ಜನವರಿಯಲ್ಲಿ ನಡೆದ “ಒಡಿಶಾ ಓಪನ್ ಸೂಪರ್ 100′ ಕೂಟದ ಪ್ರಶಸ್ತಿ ಕಿರಣ್ ಪಾಲಾಗಿತ್ತು. ಈ ಸಾಧನೆಯಿಂದಾಗಿ ಅವರು ಏಷ್ಯನ್ ಬ್ಯಾಡ್ಮಿಂಟನ್ ಪಂದ್ಯಾವಳಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.
ಇದನ್ನೂ ಓದಿ:ಏಶ್ಯನ್ ಗೇಮ್ಸ್ ಆರ್ಚರಿ: ದೀಪಿಕಾ ಇಲ್ಲದ ವನಿತಾ ತಂಡ ಆಯ್ಕೆ
17 ವರ್ಷದ ಅನುಪಮಾ ಉಪಾಧ್ಯಾಯ ಗೆದ್ದ ದ್ವಿತೀಯ ಪ್ರಶಸ್ತಿ ಇದಾಗಿದೆ. ಕಳೆದ ವರ್ಷ ನಡೆದ “ಇನ್‌ಫೋಸಿಸ್ ಫೌಂಡೇಶನ್ ಇಂಟರ್ ನ್ಯಾಶನಲ್ ಚಾಲೆಂಜ್’ ಕೂಟದಲ್ಲಿ ಅವರು ಚಾಂಪಿಯನ್ ಆಗಿದ್ದರು.