ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಸೇರಿದಂತೆ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಆರ್.ಟಿ.ನಗರದಲ್ಲಿರುವ ಗ್ರಂಥಾಲಯ ಸಹಾಯಕಿಯೊಬ್ಬರು ಲೈಂಗಿಕ ದೌರ್ಜನ್ಯದ ದೂರನ್ನು ಮುಖ್ಯಮಂತ್ರಿ ಅವರ ಕಚೇರಿಗೆ ನೀಡಿದ್ದಾರೆ. ಈ ದೂರನ್ನು ಸಚಿವರ ಗಮನಕ್ಕೆ ತರಬೇಕು ಮತ್ತು ಕ್ರಮ ಕೈಗೊಳ್ಳಬೇಕು ಎಂಬ ಟಿಪ್ಪಣಿಯೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿಗೆ ಮುಖ್ಯಮಂತ್ರಿ ಕಚೇರಿಯಿಂದ ರವಾನಿಸಲಾಗಿದೆ.
ತಮ್ಮ ದೂರಿನಲ್ಲಿ ಇಲಾಖೆಯು ಉಪನಿರ್ದೇಶಕ ಚಂದ್ರಶೇಖರ್ ಎಚ್., ಅಧೀಕ್ಷಕ ಆನಂದ ಶಿವಪ್ಪ ಹಡಪದ, ಗ್ರಂಥಾಲಯ ಸಹಾಯಕ ನಾರಾಯಣ ಮೂರ್ತಿ, ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅವರನ್ನು ಸಹ ಉಲ್ಲೇಖೀಸಲಾಗಿದ್ದು ಈ ಐವರು ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕರ್ತವ್ಯ ಲೋಪದ ಆರೋಪ ಹೊರಿಸಿ ಎರಡು ವರ್ಷದ ವಾರ್ಷಿಕ ಬಡ್ತಿಯನ್ನು ಕಡಿತಗೊಳಿಸಲು ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರ ಆಪ್ತ ಕಾರ್ಯದರ್ಶಿ ಅವರು, ಸತೀಶ್ ಕುಮಾರ್ ವಿರುದ್ದದ ದೂರು ತಮ್ಮಲ್ಲಿಗೆ ಬಂದಿರುವುದನ್ನು ಉದಯವಾಣಿಗೆ ಖಚಿತ ಪಡಿಸಿದ್ದು, ಈ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
2019-20ರ ಸಾಲಿನಲ್ಲಿ ಕೋವಿಡ್ ಕೆಲಸ ಮತ್ತು ಗ್ರಂಥಾಲಯದ ಕೆಲಸ ಎರಡನ್ನೂ ಮಾಡಬೇಕು ಎಂದು ತಿಳಿಸಿದ್ದರು. ಈ ಸಮಯದಲ್ಲಿ ನಾನು ಬಯಲು ರಂಗ ಮಂದಿರ ಶಾಖಾ ಗ್ರಂಥಾಲಯದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅದೇ ಸಮಯದಲ್ಲಿ ಶಾಖೆ ಗ್ರಂಥಾಲಯ ಸ್ಥಳಾಂತರಗೊಂಡಿದೆ. ಈ ಸಂದರ್ಭದಲ್ಲಿ ಎರಡು ರಶೀದಿ ಪುಸ್ತಕಗಳು ಕಾಣೆಯಾಗಿದೆ. ರಶೀದಿ ಪುಸ್ತಕ ಕಾಣೆಯಾದ ಪ್ರಕರಣಲ್ಲಿ ನನ್ನದು ಯಾವುದೇ ತಪ್ಪಿಲ್ಲ ಎಂದು ಉಪ ನಿರ್ದೇಶಕಿ ಸರಸ್ವತಿ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಕಂಡು ಬಂದಿದೆ.
ಸತೀಶ್ ಹೊಸಮನಿ ಅವರ ಕಚೇರಿಗೆ ಭೇಟಿ ನೀಡಿ ಘಟನೆಯ ಬಗ್ಗೆ ವಿವರಣೆ ನೀಡಿದೆ. ಆಗ ನಿರ್ದೇಶಕರು, “ನಾನಿದ್ದೇನಮ್ಮ, ನಿನಗೇಕೆ ಚಿಂತೆ, ನಾನು ಹೇಳಿದ ಹಾಗೆ ನೀನು ಕೇಳು, 20 ಸಾವಿರ ರೂ.ನನಗೆ ಕೊಡು ಮತ್ತು ರಾತ್ರಿ ಊಟಕ್ಕೆ ರೆಡಿ ಮಾಡು, ಕರೆ ಮಾಡು ಬಂದು ಎಲ್ಲವನ್ನೂ ಸರಿ ಮಾಡುತ್ತೇನೆ” ಎಂದು ಹೇಳಿದ್ದಾರೆ. ನಾನು 2022ರ ಸೆ.29 ರಂದು ನಿರ್ದೇಶಕರ ಇನ್ನೊಂದು ಕೊಠಡಿಯಲ್ಲಿ 20 ಸಾವಿರ ರೂ. ಇಟ್ಟಿದ್ದು, ಸಮಸ್ಯೆಯನ್ನು ಪರಿಹರಿಸುತ್ತಾರೆಂದು ತಿಳಿದುಕೊಂಡಿದ್ದೆ. ಅದರೆ ಊಟಕ್ಕೆ ರೆಡಿ ಮಾಡಲು ನನಗೆ ಇಷ್ಟ ಇರಲಿಲ್ಲ. ಈ ವಿಚಾರಕ್ಕೆ ಒಪ್ಪದ ನನ್ನ ಮೇಲೆ ದಿನನಿತ್ಯ ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂದು ದೂರುದಾರೆ ವಿವರಿಸಿದ್ದಾಳೆ.