Advertisement

ನೊಂದವರ ಪರ ನಿಲ್ಲದ ಪೊಲೀಸರು

03:27 PM Apr 27, 2022 | Team Udayavani |

ಶಹಾಪುರ: ತಾಲೂಕಿನಲ್ಲಿ ಅಪಘಾತ, ಶಂಕಿತ ಕೊಲೆ, ಕಳ್ಳತನದಂತಹ ಪ್ರಕರಣಗಳು ಮುಚ್ಚಿ ಹೋಗಲು ಪೊಲೀಸರೇ ಕಾರಣರಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ಯಾಲಯದ ಎದುರು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಮಾತನಾಡಿದ ರೈತ ಮುಖಂಡ ಚನ್ನಪ್ಪ ಆನೆಗುಂದಿ, ಎಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುತ್ತದೋ ಅಲ್ಲಿ ಶಾಂತಿ ವಾತಾವರಣ ಇರುತ್ತದೆ. ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯವಾಗಿದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್‌ ಸಿಬ್ಬಂದಿಗಳೇ ಕರ್ತವ್ಯ ಲೋಪ ಎಸಗುತ್ತಿದ್ದು ರಾಜಕೀಯ ನಾಯಕರಿಗೆ ಮಣಿದು ತಾಲೂಕಿನ ಕೆಲ ಗಂಭೀರ ಪ್ರಕರಣಗಳನ್ನೇ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಏ. 12ರಂದು ತಾಲೂಕಿನ ಸಗರ ಗ್ರಾಮದ ಸೋಪಣ್ಣ ಮಲ್ಲಪ್ಪ ಹಿಂದಿನಮನೆ ಅಪಘಾತದಲಿ ಮೃತಪಟ್ಟಿದ್ದು, ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು. ಅಲ್ಲದೇ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಮಲ್ಲಣ್ಣನ ಕುಟುಂಬದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಅಲ್ಲದೇ ತಾಲೂಕಿನಲ್ಲಿ ಕಳ್ಳತನ, ಶಂಕಿತ ಕೊಲೆ ಪ್ರಕರಣಗಳು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲವಾಗಿದ್ದು, ಅವುಗಳನ್ನು ಮುಚ್ಚಿ ಹಾಕುವ ಯತ್ನದಲ್ಲಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ಇಲ್ಲಿ ಪ್ರಕರಣಗಳನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆಕೈಗೊಂಡು ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಅಲ್ಲದೇ ತಾಲೂಕಿನ ರೈತರ ಪಂಪ್‌ ಸೆಟ್‌, ಸೋಲಾರ್‌, ಬೈಕ್‌ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳದಿರುವುದು ಸಂಶಯಕ್ಕೆ ಕಾರಣವಾಗಿದೆ. ತಾಲೂಕಿನ ಸೈದಾಪುರ ಗ್ರಾಮದ ಬಸವರಾಜ ಪೂಜಾರಿ ಭಾನುಮತಿ ಮಾಡಿಸುತ್ತಿದ್ದು, ಮಹಿಳೆಯರನ್ನು ವಂಚಿಸುವುದು ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದು ಕೂಡಲೇ ಆತನನ್ನು ಬಂಧಿಸಬೇಕು. ಜಿಲ್ಲಾದ್ಯಂತ ಮೀಟರ್‌ ಬಡ್ಡಿ ಮಟ್ಕಾ, ಜೂಜಾಟದಿಂದ ಜನತೆ ಜೀವನ ಕಳೆದುಕೊಳ್ಳುತ್ತಿದ್ದಾರೆ. ಈ ಕೂಡಲೇ ಸಹಾಯವಾಣಿ ಒದಗಿಸಿ ಅಪರಾಧ ತಡೆಗಟ್ಟಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಸಿಐಟಿಯು ಸಂಚಾಲಕ ಜೈಲಾಲ್‌ ತೋಟದಮನಿ, ಶರಣಪ್ಪ ಜಾಕನಳ್ಳಿ, ಮಾರ್ಥಂಡಪ್ಪ ಹಿಂದಿನಮನಿ, ಈರಣ್ಣ ಹಿಂದಿನಮನಿ, ಮಡಿವಾಳಪ್ಪ ದೇಸಟ್ಟಿ, ಗುರುರಾಜ ಬೈಚಬಾಳ, ಮಲ್ಲಿಕಾರ್ಜುನ್‌ ಪಾಟೀಲ್‌ ಸೇರಿದಂತೆ ಮೃತ ಸೋಪಣ್ಣನ ಕುಟುಂಬಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next