ಬೆಂಗಳೂರು: ಇಲ್ಲಿನ ರೆಸಾರ್ಟ್ ನಲ್ಲಿ ವಾಸ್ತವ್ಯವಿರುವ ಮಧ್ಯಪ್ರದೇಶ ಕೈ ನಾಯಕರ ಮನವೊಲಿಕೆಗೆ ಬಂದ
ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಹಲವು ಪ್ರಹಸನಗಳಿಗೆ ಬುಧವಾರ ಬೆಳಿಗ್ಗೆ ಬೆಂಗಳೂರು ಸಾಕ್ಷಿಯಾಯಿತು.
ಇಲ್ಲಿನ ಯಲಹಂಕ ಬಳಿಯ ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಕೆಪಿಸಿಸಿ ಅಧ್ಯಕ್ಷ
ಡಿ ಕೆ ಶಿವಕುಮಾರ್ ಸೇರಿದಂತೆ ಆಗಮಿಸಿದ್ದರು. ಆದರೆ ರೆಸಾರ್ಟ್ ಗೆ ಪೊಲೀಸ್ ಬಿಗು ಭದ್ರತೆ ಒದಗಿಸಲಾಗಿದ್ದು, ಕೈ ನಾಯಕರಿಗೆ ರೆಸಾರ್ಟ್ ಗೆ ಒಳ ಹೋಗಲು ಅವಕಾಶ ನೀಡಲಿಲ್ಲ.
ಇದರಿಂದಾಗಿ ದಿಗ್ವಿಜಯ್ ಸಿಂಗ್ ರೆಸಾರ್ಟ್ ಎದುರುಗಡೆ ಧರಣಿ ಆರಂಭಿಸಿದರು. ಪೊಲೀಸರ ಮನವಿಗೂ ಜಗ್ಗದೇ ಧರಣಿ ಮುಂದುವರಿಸಿದ್ದರಿಂದ ಸ್ಥಳದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ಧಾರೆ. ಕಾಂಗ್ರೆಸ್ ನಾಯಕರನ್ನು ಅಮೃತಹಳ್ಳಿ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ.
ಯಲಹಂಕದ ರಮಡ ರೆಸಾರ್ಟ್ ನಲ್ಲಿ ಮಧ್ಯಪ್ರದೇಶದ 21 ಜನ ಬಂಡಾಯ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯಲ್ಲಿ ಕಮಲ್ ನಾಥ್ ಸರಕಾರಕ್ಕೆ ವಿಶ್ವಾಸಮತ ಯಾಚಿಸಲು ಹತ್ತು ದಿನಗಳ ರಿಲೀಫ್ ಸಿಕ್ಕ ಕಾರಣ ಶಾಸಕರ ಮನವೊಲಿಕೆಗೆ ದಿಗ್ವಿಜಯ್ ಸಿಂಗ್ ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದರು.