ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿಯಲ್ಲಿ ಪ್ರಕೃತಿ, ದಸರಾ, ಮೀ ಟೂ ವಿವಾದ ಸೇರಿದಂತೆ ಹಲವು ವಿಷಯಗಳ ಕಾವ್ಯವಾಚನ ಮಾಡುವ ಮೂಲಕ ಯುವ ಕವಿಗಳು ಕೇಳುಗರ ಮನತಣಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಯುವ ಕವಿಗಳು ಕೊಡಗಿನ ಪ್ರವಾಹ, ಮೈಸೂರು ದಸರಾ ಸಂಭ್ರಮ, ಮೀ ಟೂ ವಿವಾದ ಹೀಗೆ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲಿದರು. ವಾಣಿ ರಾಘವೇಂದ್ರ ಅವರು “ಕಲೆಗಳ, ಕವಿಗಳ ಹಬ್ಬ ಮೈಸೂರು ದಸರಾ’ ಎಂದು ಕವನದ ಮೂಲಕ ದಸರೆಯ ಸೊಬಗನ್ನು ಕಟ್ಟಿಕೊಟ್ಟರು.
ನಂತರ ಸಾಲುಮರದ ಶ್ರೀಕಂಟೇಶ್ವರ “ಮೀ ಟೂ, ಮೀ ಟೂ ಎನ್ನುತ್ತಾ, ಎಂದೋ ತಿಳಿದೋ, ತಿಳಿಯದೋ ಮಾಡಿದ ತಪ್ಪನ್ನು ಇಂದು ಹಾರಾಜು ಹಾಕುವುದು ಎಷ್ಟು ಸರಿ’ ಎಂದು ಕವನದ ಮೂಲಕ ಪ್ರಶ್ನಿಸಿದರು. ಉಳಿದಂತೆ ಅಹಂ ಎಂತಹ ಕಾಯಿಲೆ ಎಂಬುದನ್ನು “ನಾನು’ ಕವನ, “ಧರೆ ಉರುಳಿದರು ಉಳಿಯಬಹುದೇ ನಾವು’ ಎಂಬಿತ್ಯಾದಿ ಕವನಗಳು ಕೇಳುಗರಿಗೆ ಮುದನೀಡಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್.ವೆಂಕಟರಾಮಯ್ಯ ಮಾತನಾಡಿ, ಸಮಾಜದ ತಲ್ಲಣ್ಣವನ್ನು ಕವನದ ಮೂಲಕ ಯುವ ಕವಿಗಳು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಸಂತೋಷದ ವಿಚಾರ. ಚಿಕ್ಕವರು, ದೊಡ್ಡವರೆನ್ನದೇ ಎಲ್ಲರೂ ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಭಾವನೆಗಳನ್ನು ಕವನದ ಮೂಲಕ ತಿಳಿಸುವ ಪ್ರಯತ್ನ ಮಾಡಿರುವುದು ಉತ್ತಮ ವಿಚಾರ.
ಮತ್ತಷ್ಟು ಓದಿನೊಂದಿಗೆ ಇನ್ನೂ ಉತ್ತಮವಾಗಿ ಬರೆಯಿರಿ ಎಂದು ಸಲಹೆ ನೀಡಿದರು. ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ಸರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷೆ ಎ.ಹೇಮಗಂಗಾ, ಉಪಾಧ್ಯಕ್ಷ ಹೊಮ್ಮ ಮಂಜುನಾಥ್ ಇತರರು ಇದ್ದರು.