ವಿಟ್ಲದಲ್ಲಿ ಹಗಲು, ರಾತ್ರಿ ಚೆಂಡೆ, ಮದ್ದಳೆ ಪೆಟ್ಟಿನ ಸದ್ದು ಕೇಳಿ ಮೈಮರೆತ ಪ್ರೇಕ್ಷಕರು ಬೇರೆ ಬೇರೆ ಮಕ್ಕಳ ತಂಡಗಳಿಂದ ಸತತ 20 ಗಂಟೆ ಯಕ್ಷಗಾನ ಪ್ರದರ್ಶನದ ಬಳಿಕವೇ ಕುಳಿತಲ್ಲಿಂದ ಮೇಲೆದ್ದರು. ಇದು ಈ ಮಳೆಗಾಲದ ಮಹೋನ್ನತ ಯಕ್ಷಗಾನದ ಒಂದು ನೋಟ.
ಪ್ರತೀ ವರ್ಷವೂ ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನದ ವತಿಯಿಂದ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸುತ್ತ ಬರಲಾಗಿದೆ. ಹಗಲು ರಾತ್ರಿ ಯಕ್ಷಗಾನ ಏರ್ಪಡಿಸಿ, ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹಿಸಿ, ಪ್ರೇಕ್ಷಕರಿಗೆ ಯಕ್ಷಗಾನ ಸವಿಯನ್ನುಣ್ಣಿಸುವ ಸಂಜೀವ ಪೂಜಾರಿ ಅವರು, ಈ ವರ್ಷ ಸ್ವಲ್ಪ ಭಿನ್ನವಾದ ಕಲ್ಪನೆಯಲ್ಲಿ ಯೋಜನೆ ರೂಪಿಸಿ ಮಕ್ಕಳ ಯಕ್ಷಗಾನ ಪ್ರದರ್ಶನ “ವಿಟ್ಲ ಯಕ್ಷೋತ್ಸವ’ವನ್ನು ಚಂದಳಿಕೆಯಲ್ಲಿರುವ ಭಾರತ ಆಡಿಟೋರಿಯಂನಲ್ಲಿ ಆಯೋಜಿಸಿದ್ದರು.
ಪ್ರದರ್ಶನಕ್ಕಾಗಿ ಸುಮಾರು 20 ಮಕ್ಕಳ ತಂಡಗಳಿಂದ ಅರ್ಜಿ ಬಂದಿತ್ತು. ಅದರಲ್ಲಿ ಯಕ್ಷ ಭಾರತ ಸೇವಾ ಪ್ರತಿಷ್ಠಾನವು ಕಾಸರಗೋಡು ಜಿಲ್ಲೆಯ 5 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 5 ತಂಡಗಳು ಸೇರಿ ಒಟ್ಟು 10 ತಂಡಗಳನ್ನು ಆಯ್ಕೆ ಮಾಡಿ ವಿವಿಧ ಪ್ರಸಂಗಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಬೆಳಗ್ಗೆ ಗಂಟೆ 9.30ರಿಂದ ಆರಂಭವಾದ ಯಕ್ಷಗಾನ ರಾತ್ರಿ 12.30ರೊಳಗೆ ಮುಗಿಯಬೇಕಿತ್ತಾದರೂ ಕಲಾವಿದರ ಉತ್ಸಾಹ ಮತ್ತು ಪ್ರೇಕ್ಷಕರ ಪ್ರೋತ್ಸಾಹ ದೊಂದಿಗೆ ಮರುದಿನ ಬೆಳಗ್ಗೆ ಗಂಟೆ 5.30ರ ತನಕ ಮುಂದುವರಿಯಿತು.
ದೇವಕಾನ ಶ್ರೀಕೃಷ್ಣ ಭಟ್ ಅವರು ತನ್ನ 12 ಮಂದಿ ತಂಡದೊಂದಿಗೆ ಪುಟ್ಟ ಕಲಾವಿದರಿಗೆ ಬಣ್ಣ ಹಚ್ಚಿ, ವೇಷಭೂಷಣ ತೊಡಿಸಿ, ಅವರನ್ನು ಸಿದ್ಧಪಡಿಸಿದ ರೀತಿ ಶ್ಲಾಘನೆಗೆ ಪಾತ್ರವಾಯಿತು.
ಅಡ್ಯನಡ್ಕ ಯಕ್ಷಗಾನ ಕಲಾ ಸಂಘವು ಸುದರ್ಶನ ವಿಜಯ ಪ್ರಸಂಗ, ಆಲಂಕಾರು ಮಯೂರ ಸಾಂಸ್ಕೃತಿಕ ಕಲಾ ಕೇಂದ್ರವು ಅಗ್ರಪೂಜೆ, ವಿಟ್ಲ ಆರ್.ಕೆ.ಯಕ್ಷಗಾನ ಕಲಾ ಕೇಂದ್ರವು ಸುದರ್ಶನ ವಿಜಯ, ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಕಲಾ ಕ್ಷೇತ್ರವು ಕುಶಲವ ಕಾಳಗ, ಏಳಾRನ ಲಲಿತಾ ಯಕ್ಷ ತಂಡವು ಬಬ್ರುವಾಹನ ಕಾಳಗ, ಕಾಸರಗೋಡು ಪ್ರಣವ ಕಲಾ ವೃಂದವು ಶ್ರೀ ಗಣಪತಿ ಮಹಿಮೆ, ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನವು ಶಾಂಭವಿ ವಿಲಾಸ, ಪೆರ್ಲ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರವು ವೀರ ಬಬ್ರುವಾಹನ, ಕಾಸರಗೋಡು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರವು ಮತ್ಸ್ಯಾವತಾರ ಮತ್ತು ಕನ್ಯಾನ ಅಂಗ್ರಿ ಅಮರಗಿರಿ ಶ್ರೀ ಉಳ್ಳಾಲ್ತಿ ದುರ್ಗಾ ಪರಮೇಶ್ವರೀ ಯಕ್ಷಗಾನ ತಂಡವು ಶ್ರೀ ದೇವೀ ಮಹಿಷಮರ್ದಿನಿ ಪ್ರಸಂಗವನ್ನು ಪ್ರದರ್ಶಿಸಿದವು.
ಮಕ್ಕಳು ರಂಗಸ್ಥಳಕ್ಕೇರಿದ ಬಳಿಕ ಕೆಲವೊಂದು ಬಾರಿ ಅರ್ಥ ಹೇಳಲು ಮರೆತು ಹೋಗಿ ತಬ್ಬಿಬ್ಟಾ ಗುವುದು ಸಹಜ. ಅದು ಕಲಿಕೆಯ ಭಾಗವೂ ಹೌದು. ಎಡವಿ ಬಿದ್ದೇ ನಡೆಯುವುದು ಮಕ್ಕಳ ಸಹಜ ಗುಣ ಮತ್ತು ಎಲ್ಲೂ ಪ್ರಸಂಗ ಮೀರಿದ ಮಾತು ಕೇಳಿ ಬರುವುದಿಲ್ಲ. ಅದೇ ರೀತಿ ಮಕ್ಕಳ ತಂಡಗಳ ಪ್ರದರ್ಶನ ಅಂದ ಮೇಲೆ ಕೆಲವೊಂದು ತಪ್ಪುಗಳು ಘಟಿಸುತ್ತವೆ. ಆದರೆ ಅದನ್ನು ತಿದ್ದಿ, ಮುಂದಡಿಯಿಡುವ ರೀತಿ ಹಿಮ್ಮೇಳ ಕಲಾವಿದರಿಗೆ ರೂಢಿಯಿರುತ್ತದೆ. ಪ್ರೇಕ್ಷಕರಿಗೂ ಅದು ಸಹ್ಯವೇ ಆಗಿದೆ. ಇದನ್ನೆಲ್ಲ ಮೀರಿ ನಿಲ್ಲುವ ಪ್ರೇಕ್ಷಕರ ಕಲಾಭಿಮಾನ ಮೆಚ್ಚ ತಕ್ಕದ್ದು. 20 ಗಂಟೆಗಳ ಅವಧಿಯಲ್ಲೂ ಪ್ರೇಕ್ಷಕರು ಮಕ್ಕಳ ಕಲಾಪ್ರದರ್ಶನವನ್ನು ಆಸ್ವಾದಿಸಿದರು.
ಒಟ್ಟಿನಲ್ಲಿ ವಿಟ್ಲದ ಪ್ರೇಕ್ಷಕರಿಗೆ “ವಿಟ್ಲ ಯಕ್ಷೋ ತ್ಸವ’ ಒಂದು ಹೊಸ ಅನುಭವ. ಯಕ್ಷಗಾನ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲೇ ಸರಿ.
ಉದಯಶಂಕರ್ ನೀರ್ಪಾಜೆ