ಬೆಂಗಳೂರು: ಇಂದು ನಮ್ಮನ್ನಗಲಿದ ಕವಿ ಪದ್ಮಶ್ರೀ ಕೆ.ಎಸ್. ನಿಸಾರ್ ಅಹಮ್ಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಸಿದರು. ಆದರೆ 1941ರಲ್ಲಿ ನಿಸಾರ್ ಅಹಮ್ಮದ್ ಮತ್ತು ಅವರ ಸಹೋದರನನ್ನು ಬೆಂಗಳೂರಿನ ಹೃದಯಭಾಗದ ಲಾಲ್ ಬಾಗ್ ಸಮೀಪ ಇರುವ ದೊಡ್ಡಾಲದಮರ ಎಂಬಲ್ಲಿದ್ದ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಲಾಗಿತ್ತು.
ಇದು ನಿಸಾರ್ ಅವರೊಳಗಿದ್ದ ಕವಿ ಮನಸ್ಸನ್ನು ಎಳವೆಯಲ್ಲೇ ಪ್ರಭಾವಿಸಲು ಕಾರಣವಾಯ್ತು ಎಂಬುದನ್ನು ಸ್ವತಃ ನಿಸಾರ್ ಅಹಮದ್ ಅವರೇ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.
ಶಾಲಾ ಬಾಲಕನಾಗಿದ್ದ ಸಂದರ್ಭದಲ್ಲಿ ಲಾಲ್ ಬಾಗ್ ನಿಸಾರ್ ಮತ್ತು ಅವರ ಸ್ನೇಹಿತರ ನೆಚ್ಚಿನ ಆಟದ ಸ್ಥಳವಾಗಿತ್ತು. ಮಧ್ಯಾಹ್ನ ಶಾಲೆ ಬಿಟ್ಟ ಬಳಿಕ ಇವರೆಲ್ಲಾ ಪಕ್ಕದಲ್ಲಿದ್ದ ಲಾಲ್ ಬಾಗ್ ಗೆ ಬಂದು ಇವರೆಲ್ಲಾ ಆಡತೊಡಗಿದರೆಂದರೆ ಹೊತ್ತು ಕಂತುತ್ತಿರುವುದೇ ತಿಳಿಯುತ್ತಿರಲಿಲ್ಲವಂತೆ.
ಬಳಿಕವೂ ನಿಸಾರ್ ಅವರ ಲಾಲ್ ಬಾಗ್ ನಂಟು ಅವರ ಇಳಿ ವಯಸ್ಸಿನವರೆಗೂ ಮುಂದುವರೆದಿತ್ತು. ಅವರೇ ಹೇಳಿಕೊಂಡಿರುವಂತೆ ಏಕಾಂತ ಬಯಸುವ ಕವಿ ಮನಸ್ಸಿಗೆ ಲಾಲ್ ಬಾಗ್ ಅತ್ಯಂತ ನೆಚ್ಚಿನ ಸ್ಥಳವಾಗಿತ್ತಂತೆ ಹಾಗೂ ತಮ್ಮ ಕವಿತೆಗಳಿಗೆ ಮತ್ತು ಬರಹಗಳಿಗೆ ಅಗತ್ಯವಿದ್ದ ವಿಷಯ ಸಂಗ್ರಹಕ್ಕೆ ಬೆಂಗಳೂರಿನ ಗಾಂಧಿ ಬಜಾರ್ ಪ್ರಶಸ್ತ ಸ್ಥಳವಾಗಿತ್ತು ಎಂಬುದನ್ನು ನಿತ್ಯೋತ್ಸವದ ಕವಿ ತಮ್ಮ ಹಲವಾರು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ.
ಏಕಾಂತಕ್ಕೆ ಲಾಲ್ ಬಾಗ್ ಹಾಗೂ ಲೋಕಾಂತಕ್ಕೆ ಗಾಂಧಿ ಬಜಾರ್ ಎಂಬ ಮಾತನ್ನು ಕವಿ ನಿಸಾರ್ ಅಹಮದ್ ಅವರು ಪ್ರತೀ ಬಾರಿ ಹೇಳಿಕೊಳ್ಳುತ್ತಿದ್ದರು. ಹಾಗಾಗಿಯೇ ಲಾಲ್ ಬಾಗ್ ಸಹವಾಸದಿಂದ ‘ನಿತ್ಯೋತ್ಸವ’ದಂತಹ ಕವಿತೆಗಳು ಮತ್ತು ಗಾಂಧಿ ಜಜಾರ್ ಸಂಸರ್ಗದಿಂದ ‘ಮನಸು ಗಾಂಧಿ ಜಜಾರ್’ನಂತಹ ಕವನಗಳು ಪದ್ಮಶ್ರೀ ವಿಜೇತ ನಿಸಾರ್ ಅಹಮ್ಮದ್ ಅವರ ಲೇಖನಿಯಿಂದ ಕನ್ನಡಿಗರಿಗೆ ಲಭಿಸಿತು ಎಂದು ತಿಳಿದುಕೊಳ್ಳಲಡ್ಡಿಯಿಲ್ಲ.
ಲಾಲ್ ಬಾಗ್, ಗಾಂಧಿ ಬಜಾರ್ ಹಾಗೂ ಶಿವಮೊಗ್ಗ ತಮ್ಮ ಬಹುತೇಕ ಕವಿತೆಗಳಿಗೆ ಸ್ಪೂರ್ತಿ ತುಂಬಿದ ಸ್ಥಳಗಳು ಎಂಬುದನ್ನು ನಿಸಾರ್ ಅವರು ಹಲವು ಬಾರಿ ನೆನಪಿಸಿಕೊಳ್ಳುತ್ತಿದ್ದರು.
ಸಂಗ್ರಹ: ಹರಿಪ್ರಸಾದ್