Advertisement

ಪಿಎಂ ಮೋದಿ ಬಹುರಾಷ್ಟ್ರೀಯ ಕಂಪನಿಗಳ ಮಧ್ಯವರ್ತಿ: ಮಾಜಿ ಶಾಸಕ‌ ಶ್ರೀರಾಮರೆಡ್ಡಿ ವಾಗ್ದಾಳಿ

04:11 PM Sep 26, 2020 | keerthan |

ಚಿಕ್ಕಬಳ್ಳಾಪುರ: ದೇಶದಲ್ಲಿ ರೈತರ, ಕಾರ್ಮಿಕರ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಬಹುರಾಷ್ಟ್ರೀಯ ಕಂಪನಿಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ವಾಗ್ಧಾಳಿ ನಡೆಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರು,ಕಾರ್ಮಿಕರು ಮತ್ತು ಜನಸಾಮಾನ್ಯರಿಗೆ ಮಾರಕವಾಗಿರುವ ಕಾಯಿದೆಗಳನ್ನು ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಭೂ ಸುಧಾರಣೆ ಕಾಯಿದೆಯನ್ನು ತಿದ್ದುಪಡಿ ಮಾಡುವುದರಿಂದ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಲು ಮುಕ್ತ ಅವಕಾಶ ಕಲ್ಪಿಸಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ತಿದ್ದುಪಡಿ ಕಾಯಿದೆ ಜಾರಿಯಾಗುವುದರಿಂದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ನಿಯಂತ್ರಣ ಹೆಚ್ಚಾಗುತ್ತಿದೆ ಈ ಹಿಂದೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮುಕ್ತ ಸ್ವಾತಂತ್ರವನ್ನು ಹೊಂದಿದ್ದರು, ಆದರೆ ಈಗ ಕಂಪನಿಗಳು ನಿಗಧಿ ಪಡಿಸಿರುವ ಬೆಲೆಗಳಿಗೆ ರೈತರು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದು ರೈತರಿಗೆ ನೀಡುತ್ತಿರುವ ಸ್ವಾತಂತ್ರವೇ? ಎಂದು ಪ್ರಶ್ನಿಸಿದ‌ ಮಾಜಿ ಶಾಸಕರು ರೈತರು ಸತ್ಯಾಂಶವನ್ನು ಅರಿತು ಜಾಗೃತರಾಗಬೇಕೆಂದರು.

ಇದನ್ನೂ ಓದಿ:ವಿಜಯಪುರ: ಮಳೆಯ ಅಬ್ಬರಕ್ಕೆ ಜನಜೀವನ ಕಂಗಾಲು

Advertisement

60 ಕೋಟಿ ಕಾರ್ಮಿಕರಿಗೆ ಗುಲಾಮಗಿರಿ: ಕೇಂದ್ರ ಸರ್ಕಾರ ಕಾರ್ಮಿಕರ ಕಾಯಿದೆಯನ್ನು ತಿದ್ದುಪಡಿ ತರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಮಿಕರಿಗೆ ಇರುವ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸಲಾಗಿದೆ ಎಂದು ದೂರಿದ ಅವರು ಕಾರ್ಮಿಕರು ವೇತನ ಕೇಳಬಾರದು, ಬೀದಿಗಿಳಿದು ಹೋರಾಟ ಮಾಡಬಾರದು ಎಂಬ ಕಟ್ಟಾಜ್ಞೆಯನ್ನು ಜಾರಿಗೆ ತರುವ ಹುನ್ನಾರ ಕಾಯ್ದೆಯಲ್ಲಿ ಅಡಗಿದೆ ಎಂದ ಮಾಜಿ ಶಾಸಕರು ಅವೈಜ್ಞಾನಿಕ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಕಾಯಿದೆಯಿಂದ ದೇಶದಾದ್ಯಂತ 60ಕೋಟಿ ಕಾರ್ಮಿಕರು ಗುಲಾಮಗಿರಿ ಮಾಡುವ ಷಡ್ಯಂತರ ನಡೆಸಲಾಗಿದೆ ಎಂದು ಆರೋಪಿಸಿದರು.

ದೇಶದಲ್ಲಿ 130 ಕೋಟಿ ಜನ ಸಂಖ್ಯೆಗೆ 460 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗಬೇಕು ಆದರೆ ಕೇವಲ 370 ಟನ್ ಮಾತ್ರ ಆಹಾರ ಉತ್ಪಾದನೆಯಾಗುತ್ತಿದೆ ದೇಶದಲ್ಲಿ ಭೂ ಸುಧಾರಣೆಯ ಕಾಯಿದೆಯಿಂದ ಕೃಷಿ ಚಟುವಟಿಕೆಗಳು ಸ್ತಬ್ಧವಾಗಿ ಆಹಾರ ಉತ್ನನ್ನಗಳ ಕೊರತೆಯಾಗಿ ವಿದೇಶದಿಂದ ಆಹಾರ ಆಮದು ಮಾಡಿಕೊಳ್ಳುವ ದುಸ್ಥಿತಿ ಒದಗಿ ಬಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದರು.

ಭೂಸುಧಾರಣೆ ಕಾರ್ಮಿಕರ ತಿದ್ದುಪಡಿಗಳ ಕಾಯಿದೆಗಳ ಕುರಿತು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ ಎಂದು ದೂರಿದ ಅವರು ಜನ ವಿರೋಧಿ ಮತ್ತು ಮಾರಕ ಕಾಯಿದೆಗಳ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹೆಚ್ಚಾಗಬೇಕೆಂದ ಅವರು ರೈತ ಉಳಿದರೆ ಕೃಷಿ ಉಳಿಯುತ್ತದೆ ಕೃಷಿ ಉಳಿದರೆ ದೇಶ ಉಳಿಯುತ್ತದೆ ತಿದ್ದುಪಡಿ ಖಾಯಿದೆಗಳಿಂದ ಮತ್ತೊಮ್ಮೆ ದೇಶ ಬಹುರಾಷ್ಟ್ರೀಯ ಕಂಪನಿಗಳ ಜಾಗೀರು ಆಗುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ ಇದೇ 28ರಂದು ನಡೆಯುತ್ತಿರುವ ಹೋರಾಟಕ್ಕೆ ಪ್ರಜಾ ಸಂಘರ್ಷ ಸಮಿತಿ ಸಂಪೂರ್ಣ ಬೆಂಬಲ ನೀಡುವ ಜತೆಗೆ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಲಿದ್ದು ಸಾರ್ವಜನಿಕರು ರೈತರು ಕೂಲಿ ಕಾರ್ಮಿಕರು ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಹಸಂಚಾಲಕ ಆರ್.ಎನ್.ರಾಜು, ಚನ್ನರಾಯಪ್ಪ, ಜಿಲ್ಲಾ ಮುಖಂಡರಾದ ಮಧು, ಫಯಾಜ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next