Maha Kumbh: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 2025ರ ಫೆಬ್ರುವರಿ 13ರಿಂದ ಆರಂಭವಾಗಲಿರುವ ಮಹಾಕುಂಭ ಮೇಳ ಒಂದು ಸ್ಮರಣೀಯ ಆಧ್ಯಾತ್ಮಿಕ ಸಂಭ್ರಮವಾಗಿದ್ದು, ಕೋಟ್ಯಂತರ ಭಕ್ತರು ಈ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಗಂಗಾ, ಯಮುನಾ ಮತ್ತು ಸರಸ್ವತಿ ನದಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ತಮ್ಮನ್ನು ತಾವೇ ಶುದ್ಧಿಕರೀಸಿಕೊಳ್ಳಲಿದ್ದಾರೆ.
ಮಹಾಕುಂಭ ಮೇಳದಲ್ಲಿ ಹಲವು ಕೌತುಕ:
ಈ ಬಾರಿಯ ಮಹಾಕುಂಭಮೇಳದಲ್ಲಿ 1972ರ ಕೇಸರಿ ಬಣ್ಣದ ವಿಂಟೇಜ್ ಅಂಬಾಸಿಡರ್ ಕಾರನ್ನು ಬಳಸುವ ಅಂಬಾಸಿಡರ್ ಬಾಬಾ ಮತ್ತು ರುದ್ರಾಕ್ಷಾ ಬಾಬಾ ಭಾಗವಹಿಸಲಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿಗಳು ಕುಂಭಮೇಳದಲ್ಲಿ ಕೌತುಕ ಮೂಡಿಸಲಿದ್ದಾರೆ. ಇದು ಕೇವಲ ಧಾರ್ಮಿಕ ಮಹತ್ವವನ್ನಲ್ಲದೇ ಭಾರತದ ಬೃಹತ್ ಸಾಂಸ್ಕೃತಿಕ ಪರಂಪರೆಯ ಅನಾವರಣವಾಗಿದೆ.
ಅಂಬಾಸಿಡರ್ ಬಾಬಾ:
ಅಂಬಾಸಿಡರ್ ಬಾಬಾ ಮಧ್ಯಪ್ರದೇಶ ಇಂದೋರ್ ನ ವಿಶೇಷ ಧಾರ್ಮಿಕ ವ್ಯಕ್ತಿಯಾಗಿದ್ದು, ಇವರು 2025ರ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ವಿಶಿಷ್ಟ ರೀತಿಯಲ್ಲಿ ಆಗಮಿಸಿರುವುದು ಎಲ್ಲರ ಗಮನ ಸೆಳೆಯಲು ಕಾರಣವಾಗಿದೆ.
ಹೌದು ಈ ಬಾಬಾ ತಮ್ಮ ನೆಚ್ಚಿನ 1972ರ ಕೇಸರಿ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಲಕ್ನೋಗೆ ಆಗಮಿಸಿದ್ದಾರೆ. ಕಳೆದ 30 ವರ್ಷಗಳಿಂದ ಬಾಬಾ ಅಂಬಾಸಿಡರ್ ಕಾರನ್ನು ಬಳಸುತ್ತಿದ್ದು, ಈ ವಿಂಟೇಜ್ ಕಾರು ಕೇವಲ ಸಂಚಾರಕ್ಕೆ ಮಾತ್ರವಲ್ಲ, ಅದು ಬಾಬಾನ ಮನೆಯೂ ಹೌದು!
ಈ ಅಂಬಾಸಿಡರ್ ವಿಂಟೇಜ್ ಕಾರಿನಲ್ಲಿ ನಾಲ್ಕು ಕುಂಭಮೇಳಕ್ಕೆ ಭೇಟಿ ನೀಡಿರುವುದಾಗಿ ಬಾಬಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಂಬಾಸಿಡರ್ ಕಾರಿನಲ್ಲಿ ಇಂದೋರ್ ನಿಂದ ಪ್ರಯಾಗ್ ರಾಜ್ ಗೆ ಆಗಮಿಸಲು 30ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದು, ಕುಂಭಮೇಳದ ನಂತರ ಬನಾರಸ್ ಹಾಗೂ ಗಂಗಾ ಸಾಗರ್ ಪ್ರದೇಶಕ್ಕೆ ಭೇಟಿ ನೀಡುವ ಉದ್ದೇಶ ಇರುವುದಾಗಿ ಬಾಬಾ ತಿಳಿಸಿದ್ದಾರೆ.
ರುದ್ರಾಕ್ಷಾ ಬಾಬಾ:
ರುದ್ರಾಕ್ಷಾ ಬಾಬಾ ಮಹಾಕುಂಭಮೇಳದಲ್ಲಿನ ಕಣ್ಮನ ಸೆಳೆಯುವ ವಿಶಿಷ್ಟ ಸಂತನಾಗಿದ್ದಾರೆ. 11 ಸಾವಿರ ರುದ್ರಾಕ್ಷಿ ಬೀಜದ 108 ಮಾಲೆಗಳನ್ನು ಬಾಬಾ ಧರಿಸಿದ್ದು, ಇದು 30ಕೆಜಿಗಿಂತಲೂ ಅಧಿಕ ತೂಕ ಹೊಂದಿದೆ. ಪ್ರತಿಯೊಂದು ರುದ್ರಾಕ್ಷಿಯೂ ಭಗವಾನ್ ಶಿವನನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆ ರುದ್ರಾಕ್ಷಾ ಬಾಬಾ ಅವರದ್ದಾಗಿದೆ. ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿಯ ಮಹತ್ವವನ್ನು ತಿಳಿಸಿಕೊಡಲಿರುವ ಇವರು ತಮ್ಮ ಅನುಯಾಯಿಗಳಿಗೆ ರುದ್ರಾಕ್ಷಿಯನ್ನು ಉಡುಗೊರೆಯಾಗಿ ಕೊಡುತ್ತಾರಂತೆ.
ರುದ್ರಾಕ್ಷ ಬಾಬಾನ ವಿಶಿಷ್ಟ ಶೈಲಿಯು ಕೇವಲ ಪ್ರಭಾವ ಬೀರುವುದಲ್ಲದೇ, ಭಗವಾನ್ ಶಿವನ ಬಗ್ಗೆ ಇರುವ ಆಳವಾದ ಪ್ರೀತಿ ಮತ್ತು ಭಕ್ತಿಯನ್ನು ಪ್ರದರ್ಶಿಸುತ್ತದೆ. ಇದರಿಂದಾಗಿ ರುದ್ರಾಕ್ಷ ಬಾಬಾ ಜನಪ್ರಿಯರಾಗಿದ್ದಾರೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 44ಕ್ಕೂ ಅಧಿಕ ದಿನಗಳ ಕಾಲ ನಡೆಯಲಿರುವ ಮಹಾಕುಂಭ ಮೇಳವು ಮಕರ ಸಂಕ್ರಾಂತಿ (ಜನವರಿ 14)ಯಂದು ಆರಂಭಗೊಳ್ಳಲಿದ್ದು, ಫೆ.26ರ ಮಹಾ ಶಿವರಾತ್ರಿಯಂದು ಸಮಾಪ್ತಿಯಾಗಲಿದೆ.