ಅಹಮದಾಬಾದ್:ಕಾಂಗ್ರೆಸ್ ಪಕ್ಷದಲ್ಲಿ ಔರಂಗಜೇಬನ ವಂಶಾಡಳಿತವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಕುರಿತು ಈ ರೀತಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಪಕ್ಷದ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ್ದರು.
ಏತನ್ಮಧ್ಯೆ ಗುಜರಾತ್ ನ ವಲ್ಸದ್ ನಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮೋದಿ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿರುವ ಔರಂಗಜೇಬ್ ಆಡಳಿತಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ನಮ್ಮದು ಜನಪರ ಕಾಳಜಿ ಹೀಗಾಗಿ ನಮಗೆ ದೇಶದ 125 ಕೋಟಿ ಜನರೇ ನಮಗೆ ಹೈಕಮಾಂಡ್ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೇ ಕಾಂಗ್ರೆಸ್ ಒಂದು ಪಕ್ಷವಲ್ಲ, ಇದೊಂದು ವಂಶಾಡಳಿತ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಪಕ್ಷದ ಹಿರಿಯ ಮುಖಂಡ ಮಣಿ ಶಂಕರ್ ಅಯ್ಯರ್ ಅವರ ಹೇಳಿಕೆಯೊಂದಕ್ಕೆ ತಿರುಗೇಟು ನೀಡಿದ ಮೋದಿ ಅವರು, ಷಹಜಹಾನ್ ನ ಸ್ಥಾನಕ್ಕೆ ಜಹಾಂಗೀರ್ ಬಂದಾಗ ಉತ್ತರಾಧಿಕಾರಿ ಆಯ್ಕೆಗೆ ಚುನಾವಣೆ ನಡೆದಿತ್ತೇ ಎಂದು ಪ್ರಶ್ನಿಸಿದ್ದಾರೆ.
ಔರಂಗಜೇಬನ ಕಾಲದಲ್ಲಿ ಉತ್ತರಾಧಿಕಾರಿ ಚುನಾವಣೆ ಇತ್ತೇ? ತಮ್ಮ ಉತ್ತರಾಧಿಕಾರಿ ಯಾರೆಂದು ಅವರೆಲ್ಲರಿಗೂ ಗೊತ್ತಿತ್ತು. ಹೀಗಿದ್ದ ಮೇಲೆ ಮತ್ತೆ ಚುನಾವಣೆ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಇದೊಂದು ಕುಟುಂಬದ ಪಕ್ಷ ಎಂದು ಒಪ್ಪಿಕೊಂಡಿದೆ ಎಂದು ಹೇಳಿದರು.