ಚೆನ್ನೈ: ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ ನಟ ಸತ್ಯರಾಜ್ ಕ್ಷಮೆ ಕೇಳುವವರೆಗೂ ಬಾಹುಬಲಿ 2 ಬಿಡುಗಡೆಗೆ ಅವಕಾಶ ನೀಡಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೋರಾಟ ತೀವ್ರಗೊಳಿಸಿರುವ ನಡುವೆಯೇ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನಟ ಸತ್ಯರಾಜ್ ಹೇಳಿಕೆಗೂ ಬಾಹುಬಲಿ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಶ್ರಮವನ್ನು ಬೆಂಬಲಿಸಿ ಬಾಹುಬಲಿ ಚಿತ್ರವನ್ನು ನೋಡಿ. ಬಾಹುಬಲಿ ಮೊದಲ ಭಾಗವನ್ನು ಪ್ರೀತಿಯಿಂದ ವೀಕ್ಷಿಸಿದ್ದೀರಿ. ಅದೇ ರೀತಿ ಬಾಹುಬಲಿ 2 ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ರಾಜಮೌಳಿ ಕನ್ನಡಿಗರಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಸತ್ಯರಾಜ್ ಹೇಳಿಕೆ ಕನ್ನಡಿಗರಿಗೆ ನೋವು ತಂದಿದೆ ಸತ್ಯ. ನಟ ಸತ್ಯರಾಜ್ ಬಾಹುಬಲಿ ಚಿತ್ರದ ಪಾತ್ರಧಾರಿ ಅಷ್ಟೇ, ನಟ ಸತ್ಯರಾಜ್ ಅಭಿಪ್ರಾಯ ಸತ್ಯರಾಜ್ ಗೆ ಮಾತ್ರ ಸೀಮಿತ. ಓರ್ವನ ವೈಯಕ್ತಿಕ ಅಭಿಪ್ರಾಯದಿಂದ ಸಮಸ್ಯೆ ಬೇಡ ಎಂದು ತಿಳಿಸಿದ್ದಾರೆ.
ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿ 2 ಚಿತ್ರದ ಮೇಲೆ ತೋರಿಸುವುದು ಸರಿಯಲ್ಲ. ನಮಗೆ ಸಂಬಂಧವೇ ಇಲ್ಲದ ವ್ಯವಹಾರದಲ್ಲಿ ನಮ್ಮನ್ನು ಸೇರಿಸಬೇಡಿ. ಸತ್ಯರಾಜ್ ಹೇಳಿಕೆ ನೀಡಿ 9 ವರ್ಷ ಕಳೆದಿದೆ. ಅವರ ಸಾಕಷ್ಟು ಚಿತ್ರಗಳು ಕರ್ನಾಟಕದಲ್ಲಿ ತೆರೆಕಂಡಿವೆ. ಪರಿಸ್ಥಿತಿ ಬಗ್ಗೆ ಸತ್ಯರಾಜ್ ಗೂ ವಿವರಣೆ ನೀಡಿದ್ದೇವೆ. ಈಗ ಬಾಹುಬಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡೋದಿಲ್ಲ ಎಂದು ಹೇಳುವುದು ನ್ಯಾಯವಲ್ಲ ಎಂದು ರಾಜಮೌಳಿ ಹೇಳಿದ್ದಾರೆ.
ಏನೇ ಹೇಳಿದ್ರೂ ಬಿಡಲ್ಲ, ಸತ್ಯರಾಜ್ ಕ್ಷಮೆ ಕೇಳ್ಬೇಕು; ವಾಟಾಳ್
ಸತ್ಯರಾಜ್ ಹೇಳಿಕೆಗೂ ಬಾಹುಬಲಿ 2 ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮ ಶ್ರಮ ಗಮನಿಸಿ ಬಾಹುಬಲಿ 2 ಚಿತ್ರ ನೋಡಿ ಎಂದು ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ಮನವಿ ಮಾಡಿಕೊಂಡಿದ್ದರೂ ಕೂಡಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಕರವೇಯ ಪ್ರವೀಣ್ ಶೆಟ್ಟಿ, ಸತ್ಯರಾಜ್ ಕ್ಷಮಾಪಣೆ ಕೇಳುವವರೆಗೂ ಚಿತ್ರ ಬಿಡುಗಡೆಗೆ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.