ಪಕ್ಕದ ಕ್ರಾಸಿನ ನಿಮ್ಮ ಮನೆ ಮುಂದೆ ನಡೆದುಹೋಗುವಾಗಲೆಲ್ಲಾ ಪುಳಕಿತಗೊಳ್ಳುತ್ತೇನೆ. ಮನೆಯ ಯಾವುದಾದರೊಂದು ಕಿಟಕಿಯ ಮೂಲಕ ನೀನು ನನ್ನನ್ನು ನೋಡುತ್ತಿದ್ದೀ ಎಂದು ಭ್ರಮಿಸುತ್ತೇನೆ.
ನಿನ್ನ ಕಣ್ಣಿನ ಭಾಷೆಯ ಅರ್ಥವೇ ನನಗೆ ತಿಳಿಯದು. ಸುಮ್ಮನೆ ತಿರುಗಿ ನೋಡುತ್ತೀಯೋ, ಇಲ್ಲಾ ಯಾವುದೋ ನಿಗೂಡ ಉದ್ದೇಶವನ್ನು ಮನದಲ್ಲಿಟ್ಟುಕೊಂಡು ತಿರುಗಿ ನೋಡುತ್ತೀಯೋ? ನನಗಂತೂ ಗೊತ್ತಾಗುತ್ತಿಲ್ಲ. ಆ ರೀತಿ ಏನಾದರೂ ವಿಷಯವಿದ್ದರೆ ಹೇಳಿಬಿಡು ಪ್ಲೀಸ್. ವಿನಾಕಾರಣ ನನ್ನನ್ನು ಕಣ್ಣಲ್ಲೇ ಕೊಲ್ಲಬೇಡ.
ನೀನು ನನ್ನ ಕಣ್ಣೆದುರಿಂದ ಹಾದುಹೋಗುತ್ತಿದ್ದರೆ ಅತಿ ಮುಗª ಹುಡುಗನಂತೆ ನಟಿಸುವೆನು ನಾನು. ನಿನ್ನೊಂದಿಗೆ ಅದೆಷ್ಟೋ ಬಾರಿ ಪರೋಕ್ಷವಾಗಿ ಮಾತನಾಡಿದ್ದೇನೆ. ಆದರೆ ನಿನ್ನನ್ನು ಪ್ರತ್ಯಕ್ಷವಾಗಿ ನೋಡಿದಾಗಲೆಲ್ಲ ಮಾತನಾಡಬೇಕೆಂದು ಆರಿಸಿಕೊಂಡ ಮಾತುಗಳೆಲ್ಲಾ ಗಂಟಲೊಳಗೇ ಹುದುಗಿ ಹೋಗುತ್ತವೆ. ಹೊರಕ್ಕೆ ಬರುವುದೇ ಇಲ್ಲ.
ನೀನು ನಮ್ಮ ಮನೆಯ ದಾರಿಯಲ್ಲಿ ನಡೆದು ಬರುತ್ತಿದ್ದರೆ ನನ್ನೆದೆಯಲ್ಲಿ ಢವಢವ. ರಸ್ತೆ ಕೊನೆಯವರೆಗೆ ನಡೆದು ಇನ್ನೇನು ತಿರುವು ತೆಗೆದುಕೊಳ್ಳುತ್ತೀ ಎನ್ನುವಷ್ಟರಲ್ಲಿ ಕಡೆಯ ಬಾರಿ ಎಂಬಂತೆ ಹಿಂತಿರುಗಿ ನೀನು ನನ್ನೆಡೆಗೆ ಬೀರುವ ನೋಟ ಇದೆಯಲ್ಲಾ, ಅದಕ್ಕೆ ಯಾವ ಖುಷಿಯೂ ಸಮನಾಗದು. ನಾನೂ ಅಷ್ಟೆ. ಪಕ್ಕದ ಕ್ರಾಸಿನ ನಿಮ್ಮ ಮನೆ ಮುಂದೆ ನಡೆದುಹೋಗುವಾಗಲೆಲ್ಲಾ ಪುಳಕಿತಗೊಳ್ಳುತ್ತೇನೆ. ಮನೆಯ ಯಾವುದಾದರೊಂದು ಕಿಟಕಿಯ ಮೂಲಕ ನೀನು ನನ್ನನ್ನು ನೋಡುತ್ತಿದ್ದೀ ಎಂದು ಭ್ರಮಿಸುತ್ತೇನೆ.
ನಿನ್ನ ಹೃದಯದಲ್ಲಿ ನನಗೆ ಜಾಗ ನೀಡಿರುವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನೀ ಪುಟ್ಟ ಹೃದಯದಲ್ಲಿ ನಿನಗೆ ಎಂದಿಗೂ ಜಾಗವಿದ್ದೇ ಇರುತ್ತದೆ. ನಿನಗೆ ಗೊತ್ತಾ? ನನ್ನ ಇ-ಮೇಲ್, ಮೊಬೈಲ್ ಪಾಸ್‌ವರ್ಡ್ ನೀನೇ ಆಗಿದ್ದೀಯಾ. ನಿನ್ನನ್ನು ಕಡೆಯ ಬಾರಿ ನಾನು ನೋಡಿದ್ದು ನನ್ನಕ್ಕನ ಸ್ನೇಹಿತೆಯ ಮದುವೆಯಲ್ಲಿ. ಆ ದಿನ ನೀನು ಸೀರೆಯುಟ್ಟುಕೊಂಡು ಬಂದಿದ್ದೆ. ನಿನ್ನನ್ನು ಸೀರೆಯಲ್ಲಿ ಕಂಡು ನನಗೆ ಹುಚ್ಚೇ ಹಿಡಿದಿತ್ತು. “ಸೀರೇಲಿ ಹುಡುಗೀರ ನೋಡಲೇಬಾರದು’ ಎನ್ನುವ ಹಾಡಿನ ಸಾಲು ಅಕ್ಷರಶಃ ನಿಜ ಅಂತ ಆವತ್ತು ಗೊತ್ತಾಯಿತು.
ಮರುದಿನದಿಂದ ನೀನು ಎಂದಿನ ದಾರಿಯಲ್ಲಿ ನಡೆದುಬರಲೇ ಇಲ್ಲ. ನಾನು ಕಾದಿದ್ದೇ ಬಂತು. ವರ್ಷವೇ ಕಳೆಯಿತು. ಆಮೇಲೊಂದು ದಿನ ದೇವಸ್ಥಾನದಲ್ಲಿ ಎದುರಾಗಿದ್ದೆ. ನಿನಗೆ ನನ್ನ ನೆನಪು ಇದ್ದೇ ಇತ್ತು ಎನ್ನುವುದಕ್ಕೆ ನೀನು ಹಿಂತಿರುಗಿ ಅದೇ ಹಳೆಯ ಧಾಟಿಯಲ್ಲಿ ಮುಗುಳ್ನಕ್ಕಿದ್ದೇ ಸಾಕ್ಷಿ. ಒಂದು ಕಳಕಳಿಯ ವಿನಂತಿ. ದಯವಿಟ್ಟು ನನ್ನಡೆಗೆ ತಿರುಗಿ ನೋಡಬೇಡಾ, ಮತ್ತೆ ನನ್ನನ್ನು ಹಳೆ ಪ್ರೇಮಿಯನ್ನಾಗಿಸಲು ಪ್ರಯತ್ನಿಸಬೇಡ.
ಇಂತಿ ನಿನ್ನ ಹಳೆ ಪ್ರೇಮಿ
– ಸಂಘರ್ಷ್, ಬಸವಕಲ್ಯಾಣ