Advertisement

ಸುಬ್ರಾಯಬೆಟ್ಟಿನ 1.5 ಎಕರೆಯಲ್ಲಿ 105 ದೇಶಿ ತಳಿಗಳ ನಾಟಿ

01:49 AM Sep 15, 2020 | mahesh |

ಕಾರ್ಕಳ: ಸಾಮಾನ್ಯವಾಗಿ ಭತ್ತದ ಪೈರು ಎಂದರೆ ಹಸುರಿನಿಂದ ಕೂಡಿ ರುತ್ತದೆ. ಆದರೆ ಕಾರ್ಕಳ ನಗರದ ಸುಬ್ರಾಯ ಬೆಟ್ಟು ನಂದಕಿಶೋರ ಅವರ ಹೊಲದಲ್ಲಿ ವಿವಿಧ ಭತ್ತದ ತಳಿ ನಳನಳಿಸುತ್ತಿದೆ. ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದರೆ, ಕಾರ್ಕಳ ತಾಲೂಕಿನ ವಿವಿಧ ಕಡೆಗಳಲ್ಲಿ ಪಡಿಲು ಬಿದ್ದ ಗದ್ದೆಯಲ್ಲಿ ನಾಟಿ ಮಾಡಿ ಭತ್ತ ಬೇಸಾಯ ಪದ್ಧತಿ ಉಳಿಸುವ ಪ್ರಯತ್ನ ನಡೆಯುತ್ತಿದೆ.

Advertisement

105 ದೇಶಿ ತಳಿಗಳು ನಂದಕಿಶೋರ ಅವರ ಕೃಷಿ ಭೂಮಿಯ 1.5 ಎಕರೆ ಭೂಮಿ ಹಡಿಲು ಬಿದ್ದಿದ್ದನ್ನು ಕಂಡ ನವೀನ್‌ಚಂದ್ರ ಜೈನ್‌ ಹಾಗೂ ಅಬುಬೂಕರ್‌ ಅವರು ಮುತುವರ್ಜಿ ವಹಿಸಿ ಜಾಗವನ್ನು ಹದಗೊಳಿಸಿ, 105 ದೇಶಿ ತಳಿಗಳನ್ನು ನಾಟಿ ಮಾಡಿದ್ದಾರೆ. ಗದ್ದೆಯಲ್ಲೀಗ ಕಪ್ಪು, ಪಚ್ಚೆ ಹೀಗೆ ವಿವಿಧ ಬಣ್ಣಗಳಿರುವ ಪೈರುಗಳು ನೋಡುಗರನ್ನು ಸೆಳೆಯುತ್ತಿದೆ.

ಗದ್ದೆ ಪೂರ್ತಿ ತಳಿಗಳ ಸಾಮ್ರಾಜ್ಯ ನಾಗಸಂಪಿಗೆ, ಸರಸ್ವತಿ, ಕಜೆ ಜಯ, ಬಿಳಿ ಜಯ, ಸಹ್ಯಾದ್ರಿ, ಚಂಪಕ, ರಾಜಮುಡಿ, ಬಿಳಿ ರಾಜಮುಡಿ ಕೆಂಪು, ಮಸ್ಸೂರಿ, ಜ್ಯೋತಿ, ಆನಂದಿ, ನವರ, ಗುಜಿ ಗುಂಡ, ಕಗಿಸಲೈ, ಮೈಸೂರ್‌ ಮಲ್ಲಿಗೆ, ಸಣ್ಣ ರಾಜಾಗ್ಯಾಮೆ, ಚಕಾವ್‌ ಪೊರಿಯಟ್‌, ರಾಜ್‌ಕಮಾಲ್‌, ಬಾಸ್ಮತಿ, ಸೇಲಂ ಸಣ್ಣ, ಗೌರಿ ಸಣ್ಣ, ಶಂಕ್ರು ಕೆಂಪಕ್ಕಿ, ಕರಿನೆಲ್ಲು, ಬೈಗಾಣ ಮಜ್ಜಿಗೆ, ಮಂಜುಗುನಿ, ಬಿಳಿ ನೆಲ್ಲು, ದೀಪಕ್‌ ರಾಣಿ, ಕಾಲಬತ್ತ, ಮೈಸೂರು ಸಣ್ಣ, ವಂದನ, ದೊಡ್ಡ ಭತ್ತ, ನೆಲ್ಲೂರು ಪುಟ್ಟಲ್‌, ರತ್ನ ಸಾಗರ್‌, ಕರಿಗೆ ಜವುಳಿ, ಬಾರಾ ರತ್ನಚೂರಿ, ಬಿಳಿಮುದುಗ, ಗುಜಿ ಗುಂಡ, ಗೋಪಿಕ, ಮಧುಸೆಲೈ, ಬಿಳಿ ಮುದುಗ, ಪ್ರಯಾಕ, ಡಾಂಬರ್‌ ಸಲೈ, ಪುಟ್ಟು ಭತ್ತ, ಕರಿಕಗ್ಗ, ಬಂಗಾರ ಸಣ್ಣ, ಸಿದ್ದ ಸಣ್ಣ, ರಾಜ್‌ಬೋಗ, ಡೆಹ್ರಾಡೂನ್‌ ಬಾಸ್ಮತಿ, ಕಾಶ್ಮೀರಿ ಬಾಸ್ಮತಿ, ಎ.ಪಿ. ಜಾತಿಗೆ ಸೇರಿದ ವಿವಿಧ ತಳಿಗಳು ಗದ್ದೆಯಲ್ಲಿದೆ.

ಕಾರ್ಕಳ ಬ್ರ್ಯಾಂಡ್‌: ಕಜೆ ಅಕ್ಕಿ
ತಾಲೂಕಿನಲ್ಲಿ 40 ಎಕರೆ ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಪ್ರಯತ್ನವನ್ನು ಕೃಷಿಕ ಸಮಾಜದ ನವೀನ್‌ ಚಂದ್ರ ಜೈನ್‌ ಅವರ ಆಸಕ್ತಿಯಲ್ಲಿ ನಡೆದಿದೆ. ಇನ್ನು ಹೆಚ್ಚಿನ ಬೆಳೆ ಬೆಳೆಯುವ ಗುರಿ ಅವರಲ್ಲಿದೆ. ಇನ್ನು ತಾಲೂಕಿನ ಹಲವಾರು ಸಂಘಟನೆಗಳು, ಕೃಷಿ ಬ್ಯಾಂಕುಗಳು, ಕೃಷಿಕರು ಹಡಿಲು ಬಿದ್ದ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸಿವೆ. ಕಜೆ ಅಕ್ಕಿ ಕಾರ್ಕಳ ಬ್ರ್ಯಾಂಡ್‌ ಬೆಳೆಯಾಗಿ ಕೂಡ ಆಯ್ಕೆಗೊಂಡಿದೆ.

ಮಾರುಕಟ್ಟೆ ಸಿಗಬೇಕಿದೆ
ಹೈಬ್ರಿಡ್‌ ಭತ್ತದ ತಳಿಗೆ ಹೋಲಿಸಿದರೆ ದೇಶಿ ತಳಿಯ ಭತ್ತದ ಪೈರಿಗೆ ರೋಗ ಹಾಗೂ ಕೀಟಬಾಧೆ ಕಡಿಮೆ. ಅಷ್ಟೇ ಅಲ್ಲದೆ ನೀರಿನ ಪ್ರಮಾಣವೂ ಕಡಿಮೆ. ದೇಶಿ ಭತ್ತಕ್ಕೆ ಬೇಡಿಕೆ ಇದ್ದರೂ ಮಾರುಕಟ್ಟೆಯ ಕೊರತೆ ಇದೆ. ಇದರಿಂದ ದೇಶಿ ಭತ್ತವನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆ.

Advertisement

ರುಚಿಯಲ್ಲಿ ವ್ಯತ್ಯಾಸ ಕಂಡೆ
ಮನೆಯಲ್ಲಿ ಊಟಕ್ಕೆ ಅಂಗಡಿ ಯಿಂದ ಅಕ್ಕಿ ತರುತ್ತಿದ್ದೆವು. ಒಂದು ಬಾರಿ ಸ್ಥಳೀಯರೊಬ್ಬರು ಸ್ಥಳೀಯವಾಗಿ ಬೆಳೆದ ಅಕ್ಕಿಯನ್ನು ತಂದು ನೀಡಿದ್ದರು. ರುಚಿಯಲ್ಲಿ ವ್ಯತ್ಯಾಸ ಕಂಡಾಗ ದೇಶಿ ಭತ್ತದ ಬಗ್ಗೆ ಆಸಕ್ತಿ ಮೂಡಿತ್ತು. ಅಂದಿನಿಂದ ಭತ್ತ ಬೇಸಾಯದ ಕುರಿತು ವಿಶೇಷ ಆಸಕ್ತಿ ವಹಿಸಿ ಭತ್ತ ಬೇಸಾಯದ ಕಡೆ ಗಮನಹರಿಸುತ್ತ ಬಂದಿರುವೆ.
-ಅಬುಬೂಕರ್‌ ಮುರತ್ತಂಗಡಿ

ಖುಷಿ ತಂದಿದೆ
ಏಳೆಂಟು ವರ್ಷಗಳಿಂದ ಜಾಗ ಹಾಗೇ ಇತ್ತು. ಈ ವರ್ಷ ಖಾಲಿ ಜಾಗವಿದ್ದ ಜಾಗದಲ್ಲಿ ಭತ್ತ ಬೆಳೆಯಲಾಗಿದೆ. ನವೀನ್‌ಚಂದ್ರ ಜೈನ್‌ ಹಾಗೂ ಅಬುಬೂಕರ್‌ ಅವರು ಭತ್ತ ಬೆಳೆಯುವ ಕುರಿತು ಸಲಹೆ ನೀಡಿದ್ದರು. ಸುಂದರವಾಗಿ ಬೆಳೆದು ನಿಂತಿದೆ. ನೋಡಿದವರು ತಾವು ಕೂಡ ಭತ್ತ ಬೆಳೆಸುವ ಆಸಕ್ತಿ ತೋರುತ್ತಿದ್ದಾರೆ.
-ನಂದಕಿಶೋರ, ಸುಬ್ರಾಯಬೆಟ್ಟು, ಜಾಗದ ಮಾಲಕರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next