Advertisement

ಸಸಿಗಳನ್ನು ನೆಟ್ಟು ನಗರ ಹಸಿರಾಗಿಸಿ

12:20 PM Dec 09, 2018 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಪರಿಸರ ನಾಶವಾಗಿ ಕಾಂಕ್ರೀಟ್‌ ನಗರವಾಗಿ ಪರಿವರ್ತನೆಯಾಗಿದ್ದು, ಪ್ರತಿಯೊಬ್ಬರೂ ಮರಗಳನ್ನು ನೆಟ್ಟು, ಬೆಳೆಸುವ ಮೂಲಕ ನಗರವನ್ನು ಹಸಿರಾಗಿಸಬೇಕಿದೆ ಎಂದು ಮೇಯರ್‌ ಗಂಗಾಂಬಿಕೆ ಕರೆ ನೀಡಿದರು.

Advertisement

ಅಗ್ರಹಾರ ದಾಸರಹಳ್ಳಿ ವಾರ್ಡ್‌ನಲ್ಲಿ ನೇತಾಜಿ ಸುಭಾಷ್‌ ಚಂದ್ರಬೋಸ್‌ ಅವರ ಪ್ರತಿಮೆ ಅನಾವರಣ, ಉದ್ಯಾನ, ಆಟದ ಮೈದಾನ ಹಾಗೂ ಯೋಗ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ ಏಳು ಮರಗಳಿರಬೇಕೆಂದು ಪರಿಸರವಾದಿಗಳು ಹೇಳುತ್ತಾರೆ. ಆದರೆ, ನಗರದಲ್ಲಿ ಏಳು ಜನರಿಗೆ ಒಂದು ಮರವಿದ್ದು, ಉತ್ತಮ ಆಮ್ಲಜನಕ ದೊರೆಯದಂತಾಗಿದೆ ಎಂದರು.

ಪರಿಸರ ನಾಶವು ಮನ್ಯಷ್ಯನ ಮೇಲೆ ನೇರ ಪರಿಣಾಮ ಬೀರಲಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಬೆಂಗಳೂರು ನಗರವನ್ನು ಹಸಿರು ನಗರವನ್ನಾಗಿ ಪರಿವರ್ತಿಸಲು ಪ್ರತಿಯೊಬ್ಬ ನಾಗರಿಕರೂ ಸಸಿ ನೆಟ್ಟು ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಉದ್ಯಾನವನ್ನು ಕೇವಲ ಮೂರು ತಿಂಗಳಲ್ಲಿ ಭಿವೃದ್ಧಿಪಡಿಸಲಾಗಿದ್ದು, ಆಂಗ್ಲರ ವಿರುದ್ಧ ಹೋರಾಡಿದ ಸುಭಾಷ್‌ ಚಂದ್ರ ಬೋಸ್‌ ಅವರ ಹೆಸರನ್ನು ಉದ್ಯಾನಕ್ಕೆ ನಾಮಕರಣ ಮಾಡಿರುವುದು ಅರ್ಥಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಗೋವಿಂದರಾಜನಗರದಲ್ಲಿ ಐಎಎಸ್‌ ತರಬೇತಿ ಕೇಂದ್ರ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1.75 ಕೋಟಿ ರೂ. ವೆಚ್ಚದಲ್ಲಿ ಇ-ಲೈಬ್ರರಿ ಹಾಗೂ 200 ಹಾಸಿಗೆಗಳ ಆಸ್ಪತ್ರೆಯನ್ನು ಪಾಲಿಕೆ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರನ್ನು ಸ್ಮರಿಸಿದ ಅವರು, ಅನಂತಕುಮಾರ್‌ ಅವರು ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಕಾರಣ ಮಾಡಿರಲಿಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಉಪಮೇಯರ್‌ ಭದ್ರೇಗೌಡ, ಪಾಲಿಕೆ ಸದಸ್ಯರಾದ ಶಿಲ್ಪಾ ಶ್ರೀಧರ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next