ಪಿರಿಯಾಪಟ್ಟಣ: ಸ್ವಸಾಹಾಯ ಸಂಘದಿಂದ ಪಡೆದಿದ್ದ ಸಾಲದ ಹಣ ಕಟ್ಟುವಂತೆ ಮಗನಿಗೆ ಒತ್ತಾಯ ಮಾಡಿದ್ದಕ್ಕೆ ಸ್ವಂತ ತಾಯಿಯನ್ನೇ ತನ್ನ ನಾಲ್ಕು ಚಕ್ರದ ವಾಹನದಿಂದ ಢಿಕ್ಕಿ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ.
ಸೂಳೆಕೋಟೆ ಗ್ರಾಮದ ನಾಗಮ್ಮ (65)ಎಂಬುವರೇ ಕೊಲೆಯಾದ ಮಹಿಳೆಯಾಗಿದ್ದಾರೆ. ಹೇಮರಾಜ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಈತ ಎರಡೂ ವರ್ಷಗಳ ಹಿಂದೆ ತನ್ನ ತಾಯಿ ನಾಗಮ್ಮಳ ಹೆಸರಿನಲ್ಲಿ ಖಾಸಗಿ ಫೈನಾನ್ಸ್ ಹಾಗೂ ಸ್ವಸಹಾಯ ಸಂಘಗಳಿಂದ 70 ಸಾವಿರ ರೂ.ಗಳನ್ನು ಸಾಲವಾಗಿ ತೆಗೆದುಕೊಂಡಿದ್ದು, ಕಳೆದ ಒಂದುವರೆ ವರ್ಷದಿಂದ ಸರಿಯಾಗಿ ಕಂತುಗಳನ್ನು ಮರುಪಾವತಿ ಮಾಡದೆ ಇದ್ದುದರಿಂದ ನಾಗಮ್ಮ ಸಾಲವನ್ನು ಕಟ್ಟುವಂತೆ ಸಾಕಷ್ಟು ಬಾರಿ ಒತ್ತಾಯ ಮಾಡಿದ್ದರು. ಇದರಿಂದ ಕುಪಿತಗೊಂಡು ತನ್ನ ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ್ದನು.
ನಾಗಮ್ಮ ಕಳೆದ 20 ದಿನಗಳಿಂದ ಅದೇ ಗ್ರಾಮದ ತನ್ನ ಸಹೋದರಿ ಲೀಲಾವತಿ ಮನೆಯಲ್ಲಿ ವಾಸವಾಗಿದ್ದರು. ಸಾಲ ನೀಡಿದಂತ ಖಾಸಗಿ ಫೈನಾನ್ಸ್ ನವರು ಲೀಲಾವತಿ ಮನೆಯ ಬಳಿ ಬಂದು ನಾಗಮ್ಮ ಅವರನ್ನು ಸಾಲ ಕಟ್ಟುವಂತೆ ಮತ್ತೆ ಒತ್ತಾಯ ಮಾಡಿದ್ದರು. ಇದರಿಂದ ತನ್ನ ಮಗನನ್ನು ಮತ್ತೆ ಸಾಲ ಕಟ್ಟುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹೇಮರಾಜ ಇದೇ ರೀತಿ ನನಗೆ ಒತ್ತಾಯ ಮಾಡಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಗುರುವಾರದಂದು ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಮತ್ತೆ ಸಾಲ ಕಟ್ಟುವಂತೆ ಒತ್ತಾಯ ಮಾಡಿದ್ದಕ್ಕೆ, ತನ್ನ ತೂಫಾನ್ ವಾಹನದಲ್ಲಿ ವೇಗವಾಗಿ ಬಂದು ಢಿಕ್ಕಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಮೃತ ನಾಗಮ್ಮಳ ಸಹೋದರಿ ಲೀಲಾವತಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.