ಜಮ್ಮು: ಜಮ್ಮು ಕಾಶ್ಮೀರದ ಮೇಂಧರ್ನಲ್ಲಿ 300 ಅಡಿ ಆಳದ ಕಮರಿಗೆ ಸೇನಾ ವಾಹನ ಉರುಳಿ ಬಿದ್ದು ಐವರು ಯೋಧರು ಅಸುನೀಗಿದ್ದಾರೆ. ಈ ಘಟನೆಯಲ್ಲಿ ಇನ್ನೂ 8-9 ಮಂದಿ ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಡಿ ನಿಯಂತ್ರಣ ರೇಖೆ ಸಮೀಪದ(ಎಲ್ಒಸಿ) ಬಲ್ನೋಯಿ ಎಂಬಲ್ಲಿಗೆ ಕರ್ತವ್ಯಕ್ಕಾಗಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವೇಳೆ ವಾಹನ ಸ್ಕಿಡ್ ಆಗಿ ಈ ಘಟನೆ ನಡೆದಿದೆ ಎಂದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಯೋಧರು ಉರುಳಿ ಬಿದ್ದಿದ್ದ ವಾಹನದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಯೋಧರನ್ನು ಪಾರು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಡಿ.15ರಂದು ಜಮ್ಮು-ಕಾಶ್ಮೀರದ ಬಂಡಿಪೋರ ಜಿಲ್ಲೆಯ ಗುರೇಜ್ ಎಂಬಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿ ಇಬ್ಬರು ಯೋಧರು ಗಾಯಗೊಂಡಿದ್ದರು.
ಸೆಪ್ಟೆಂಬರ್ನಲ್ಲಿ ಕಥುವಾ ಸಮೀಪ ನಡೆದಿದ್ದ ಮತ್ತೂಂದು ಅಪಘಾತದಲ್ಲಿ ಯೋಧರೊಬ್ಬರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರು.