Advertisement
ಪೈಪ್ ಕಾಂಪೋಸ್ಟ್ ಸರಳವಾದ ಜೈವಿಕ ಗೊಬ್ಬರ ತಯಾರಿಕಾ ವಿಧಾನ. ತರಕಾರಿ, ಮಾಂಸದ ತ್ಯಾಜ್ಯ ಸಹಿತ ಇತರ ಮಾಲಿನ್ಯಗಳು ಮಣ್ಣಿನೊಡನೆ ಸೇರಿ ಕೊಳೆತು ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ. ಅದನ್ನು ತಡೆಯಲು ಮನೆಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ತ್ಯಾಜ್ಯದ ಸುಲಭ ವಿಲೇವಾರಿಗೆ ಪೈಪ್ ಕಾಂಪೋಸ್ಟ್ ವಿಧಾನ ಬಹಳ ಉಪಯುಕ್ತ.
ಅತ್ಯಂತ ಸರಳ ಮತ್ತು ಪರಿಸರದ ಸ್ವಚ್ಚತೆಗೆ ಮಹತ್ವ ನೀಡುವ ಈ ಯೋಜನೆಯ ನಿರ್ವಹಣೆಗೆ ಅಧಿಕ ಸ್ಥಳ ಬೇಕಾಗಿಲ್ಲ. ಕನಿಷ್ಠ ಪಕ್ಷ 3 ಸೆಂಟ್ಸ್ ಸ್ಥಳದಲ್ಲಿ ಮನೆ ಕಟ್ಟಿದವರು ಕೂಡ ಇದನ್ನು ನಿಭಾಯಿಸಬಹುದು. ಮಾತ್ರವಲ್ಲದೆ ಈ ಪೈಪ್ ಕಂಪೋಸ್ಟ್ ನಿಂದ ಲಭಿಸಿದ ಸಾವಯವ ಗೊಬ್ಬರವನ್ನು
ನಮ್ಮ ಮನೆಯ ಹೂ, ತರಕಾರಿ ಸಹಿತ ಇನ್ನಿತರ ಬೆಳೆಗಳಿಗೆ ಬಳಸಬಹುದು. ತ್ಯಾಜ್ಯಗಳನ್ನು ತೆರೆದ ಸ್ಥಳದಲ್ಲಿ ಎಸೆಯದೆ ಇಂತಹ ಕಂಪೋಸ್ಟ್ ಮಾಡುವುದರಿಂದ ಸೊಳ್ಳೆ ಇನ್ನಿತರ ಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದಲೂ ಮುಕ್ತರಾಗಬಹುದು. ಪೈಪ್ ಕಾಂಪೋಸ್ಟ್ ವ್ಯವಸ್ಥೆ ಅಳವಡಿಸಲು ಒಟ್ಟು ಒಂದು ಸಾವಿರ ರೂ.ಗಿಂತ ಕಡಿಮೆ ವೆಚ್ಚ ತಗಲುತ್ತದೆ. ಕಾಂಪೋಸ್ಟ್ ಮಾಡುವ ವಿಧಾನ
ಒಂದು ಮೀ. ಉದ್ದದ 20 ಸೆಂ.ಮೀ. ವ್ಯಾಸದ 2 ಪಿವಿಸಿ ಅಥವಾ ಸಿಮೆಂಟ್ ಪೈಪ್ ಬಳಸಿ ಕಾಂಪೋಸ್ಟ್ ತಯಾರಿಸಲಾಗುತ್ತದೆ. ಎರಡು ಪೈಪ್ ಗಳನ್ನು ಪ್ರತ್ಯೇಕವಾಗಿ 30 ಸೆಂ.ಮೀ. ಮಣ್ಣಿನ ತಳದಲ್ಲಿ ಹೂಳಬೇಕು. ಈ ಪೈಪ್ ಒಳಗಡೆ ನಿತ್ಯ ಮಾಲಿನ್ಯಗಳನ್ನು ಹಾಕಿ ಪ್ರತ್ಯೇಕ ಮುಚ್ಚಳದಿಂದ ಮುಚ್ಚುವುದರ ಜತೆಗೆ ಒಂದಷ್ಟು ಸೆಗಣಿ ನೀರು, ಮಜ್ಜಿಗೆ ನೀರು ಅಥವಾ ಬೆಲ್ಲದ ನೀರು ಯಾ ಸಕ್ಕರೆ ನೀರನ್ನು ಚಿಮುಕಿಸಬೇಕು. ಹೀಗೆ ಒಂದು ತಿಂಗಳಾಗುತ್ತಿದ್ದಂತೆ ಒಂದು ಪೈಪ್ ಭರ್ತಿಯಾಗುತ್ತದೆ. ಬಳಿಕ ಎರಡನೇ ಪೈಪ್ ತುಂಬುತ್ತಿದ್ದಂತೆ ಮೊದಲಿನ ಪೈಪ್‌ನೊಳಗಿನ ಮಾಲಿನ್ಯ ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ.
Related Articles
Advertisement