Advertisement

ಆನೆಕಾಲು ರೋಗ ನಿಯಂತ್ರಿಸಲು ಮಾತ್ರೆ ಸೇವನೆ ಕಡ್ಡಾಯ

12:08 PM Sep 23, 2018 | |

ಯಾದಗಿರಿ: ಆನೆಕಾಲು ರೋಗ ನಿಯಂತ್ರಿಸಲು ಕಡ್ಡಾಯವಾಗಿ ಎಲ್ಲರೂ ಮಾತ್ರೆ ಸೇವಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಹಬೀಬ್‌ ಉಸ್ಮಾನ್‌ ಪಟೇಲ್‌ ಹೇಳಿದರು. ನಗರದ ಗಾಂಧಿ  ವೃತ್ತದಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಆನೆಕಾಲು ರೋಗ ಹೊಂದಿರುವ ರೋಗಿಗಳು ಈ ರೋಗವನ್ನು ಹಬ್ಬಿಸುವುದಿಲ್ಲ. ಬದಲಾಗಿ ಮೈಕ್ರೋಫೈಲೇರಿಯಾ ಪಾಸಿಟಿವ್‌ ಹೊಂದಿರುವ ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳಿಂದಲೇ ರೋಗ ಹರಡುತ್ತದೆ ಎಂದರು. ಒಟ್ಟು 2,440 ಸಿಬ್ಬಂದಿ ಮನೆ-ಮನೆ ಭೇಟಿ ನೀಡಿ ಡಿಇಸಿ ಮಾತ್ರೆಯನ್ನು ಊಟದ ನಂತರ ನುಂಗಿಸುವರು.

ಅಲ್ಪೆಂಡಜೋಲ್‌ ಮಾತ್ರೆಗಳನ್ನು ಬಾಯಿಯಲ್ಲಿಟ್ಟು ಚೀಪಬೇಕು. ಈ ಗುಳಿಗೆಗಳು ಅತ್ಯಂತ ಸುರಕ್ಷಿತವಾಗಿದ್ದು, ಕಳೆದ 50 ವರ್ಷಗಳಿಂದ ವಿಶ್ವದಾದ್ಯಂತ ಉಪಯೋಗಿಸಲ್ಪಡುತ್ತಿವೆ ಎಂದು ತಿಳಿಸಿದರು. ಯಾದಗಿರಿ, ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಆನೆಕಾಲು ರೋಗ ಹೆಚ್ಚು ಇದೆ. 5 ವರ್ಷಗಳ ಕಾಲ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಬಾರಿ ಈ ಎರಡು ಮಾತ್ರೆಗಳನ್ನು ಸೇವಿಸಿದ್ದಲ್ಲಿ ಮುಂದಿನ ಪೀಳಿಗೆಯವರು ಆನೆಕಾಲು ರೋಗದಿಂದ ಮುಕ್ತ ಆಗುತ್ತಾರೆ. ಸಣ್ಣ-ಪುಟ್ಟ ತೊಂದರೆಗಳಿಗೆ ಹೆದರಿ ಈ ಮಾತ್ರೆ ಸೇವಿಸದಿದ್ದಲ್ಲಿ ಆನೆಕಾಲು ರೋಗ ನಿಯಂತ್ರಣ ಅಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ಸೇವಿಸಬೇಕು ಎಂದು ಮನವಿ ಮಾಡಿದರು.

ಡಿಇಸಿ ಮಾತ್ರೆಗೆ ರಕ್ತದಲ್ಲಿ ಇರುವ ಮೈಕ್ರೊಫೈಲೇರಿಯಾ ಜಂತುಗಳು ನಾಶ ಹೊಂದುವುದರಿಂದ ಕೆಲವೊಮ್ಮೆ ಜ್ವರ,
ತಲೆನೋವು, ಮೈ-ಕೈ ನೋವು, ಮೈ ಹುರಿತ ಮತ್ತು ಕೆರೆತ ಕಾಣಿಸಿಕೊಳ್ಳಬಹುದು. ಈ ಅಡ್ಡ ಪರಿಣಾಮಗಳು ತಾತ್ಕಾಲಿಕವಾಗಿದ್ದು, ತಾನೇ ತಾನಾಗಿ ಒಂದು ದಿವಸದಲ್ಲಿ ಉಪಶಮನ ಆಗುತ್ತವೆ. ವೈದ್ಯರ ನೇತೃತ್ವದಲ್ಲಿ ಅಡ್ಡ
ಪರಿಣಾಮಗಳ ನಿವಾರಣಾ ತಂಡಗಳನ್ನು ಎಲ್ಲಾ ಸರಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಚಿಸಲಾಗಿದೆ ಎಂದು ವಿವರಿಸಿದರು.
 
ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಡಾ| ಭಗವಂತ ಅನವಾರ, ದೈಹಿಕ ಶಿಕ್ಷಣಾಧಿಕಾರಿ ಎಸ್‌.ಕೆ. ಸೋನಾರ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ನಿಂಗಪ್ಪ, ಶಿಕ್ಷಕ ಗುರುನಾಥರೆಡ್ಡಿ, ಹಿರಿಯ ಆರೋಗ್ಯ ಸಹಾಯಕ ಪರಮರೆಡ್ಡಿ
ಕಂದಕೂರ, ಶರಣಯ್ಯ ಗಣಾಚಾರಿ, ಬಸವರಾಜ ಕಾಂತಾ, ಅಂಬಾದಾಸ ಇದ್ದರು. ಕಾರ್ಯಕ್ರಮಕ್ಕೂ ಮೊದಲು ಕೋಲಿವಾಡದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಗಾಂಧಿ ವೃತ್ತದವರೆಗೆ ವಿದ್ಯಾರ್ಥಿಗಳೊಂದಿಗೆ ಜಾಗೃತಿ ಜಾಥಾ ನಡೆಯಿತು. ಮಕ್ಕಳಿಗೆ ಔಷಧ ನುಂಗಿಸುವ ಮೂಲಕ ಕಾರ್ಯಕ್ರಮ ಮತ್ತು ಜಾಥಾಕ್ಕೆ ಚಾಲನೆ ನೀಡಲಾಯಿತು.

2 ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ, ಮೂತ್ರಪಿಂಡ ಸಂಬಂಧಿ, ದೀರ್ಘಾವಧಿ ಕಾಯಿಲೆ, ಹೃದಯ ಮತ್ತು ಶ್ವಾಸಕೋಶ ರೋಗದಿಂದ ನರಳುತ್ತಿರುವವರಿಗೆ ಸಾಮೂಹಿಕ ಔಷಧಿ ನೀಡಿಕೆ ಇರುವುದಿಲ್ಲ. ಅಲ್ಲದೆ ಈ ಮಾತ್ರೆ ಖಾಲಿ
ಹೊಟ್ಟೆಯಲ್ಲಿ ಸೇವಿಸಬಾರದು.  ಡಾ| ಸೂರ್ಯಪ್ರಕಾಶ ಎಂ.

Advertisement

ಜಿಲ್ಲೆಯಾದ್ಯಂತ ಸೆಪ್ಟೆಂಬರ್‌ 24ರಿಂದ ಅಕ್ಟೋಬರ್‌ 6ರ ವರೆಗೆ ಸಾಮೂಹಿಕ ಡಿಇಸಿ ನುಂಗಿಸುವ ಮತ್ತು ಅಲ್ಪೆಂಡಜೋಲ್‌ ಮಾತ್ರೆ ಚೀಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ 12,45,250 ಜನರಿಗೆ ಮಾತ್ರೆ
ನುಂಗಿಸುವ ಗುರಿ ಹೊಂದಲಾಗಿದೆ.  ಹಬೀಬ ಉಸ್ಮಾನ ಪಟೇಲ್‌, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next