Advertisement

ಕಲಾವಿದರ ಸಾಧನೆಯನ್ನು ಗುರುತಿಸುವುದು ನಮ್ಮ ಆದ್ಯ ಕರ್ತವ್ಯ 

01:16 PM Mar 23, 2019 | |

ಮುಂಬಯಿ: ನಗರದಲ್ಲಿ ನಡೆಯುವಷ್ಟು ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಬೇರೆಲ್ಲೂ ನಡೆಯುವುದಿಲ್ಲ. ಇಂದು ಇಲ್ಲಿನ ತುಳು-ಕನ್ನಡಿಗರ ಭಾಷೆ, ಸಂಸ್ಕೃತಿಯ ಮೇಲಿರುವ ಅಭಿಮಾನವನ್ನು ಸೂಚಿಸು ತ್ತದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸೇವೆ 
ಸಲ್ಲಿಸುತ್ತಿರುವ  ಸಾಧಕರನ್ನು ಗೌರವಿಸಿ ರುವುದು ಸಂತೋಷದ ವಿಷಯ ಎಂದು ಅಭಿನಯ ಮಂಟಪ ಮುಂಬಯಿ ಗೌರವಾಧ್ಯಕ್ಷ ರಾಜ್‌ಕುಮಾರ್‌ ಕಾರ್ನಾಡ್‌ ಅವರು ನುಡಿದರು.

Advertisement

ಮಾ. 16ರಂದು ಸಂಜೆ ಬೊರಿವಲಿ ಪಶ್ಚಿಮದ ಆ್ಯಂಪಿ ಥಿಯೇಟರ್‌ ಸಭಾಂಗಣದಲ್ಲಿ ನಡೆದ ಪಿಲಾರ್‌ ಕ್ರಿಯೇಶನ್ಸ್‌ ಮುಂಬಯಿ ಸಂಯೋಜನೆಯ, ಕಲಾ ಸಂಘಟಕ ಕಿಶೋರ್‌ ಶೆಟ್ಟಿ ಪಿಲಾರ್‌ ಅವರ ಕಲಾ ಸಂಘಟನೆಯ ದಶಮಾನೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭದ ಮಾತಲ್ಲ. ಆದರೂ ತುಳು-ಕನ್ನಡಿಗ ಕಲಾವಿದರು ತಮ್ಮ ಮನದಾಸೆಯನ್ನು ಪೂರೈಸಲು ಅವಿರತವಾಗಿ ಶ್ರಮಿಸುತ್ತಿದ್ದು ಅಭಿನಂದನೀಯ. ಕಲೆ-ಕಲಾವಿದರನ್ನು ಗೌರವಿಸುವುದರೊಂದಿಗೆ ಅವರ ಸಾಧನೆಯನ್ನು ಗುರುತಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದು ಶುಭ ಹಾರೈಸಿದರು.

ಸಮಾರಂಭದಲ್ಲಿ ಪತ್ರಕರ್ತ, ಅಂಕಣಗಾರ ಶ್ರೀಧರ ಉಚ್ಚಿಲ್‌,  ನಗರದ ರಂಗನಟ, ತಾಳಮದ್ದಳೆ ಅರ್ಥದಾರಿ, ಸಂಘಟಕ ರವಿ ಹೆಗ್ಡೆ ಹೆರ್ಮುಂಡೆ ಅವರನ್ನು ಕಲಾಸಿರಿ ಬಿರುದಿನೊಂದಿಗೆ, ರಂಗ ಕಲಾವಿದ ಪಿ. ಬಿ. ಚಂದ್ರಹಾಸ್‌ ದಂಪತಿ,  ಗಣೇಶ್‌ ರಾವ್‌ ಪಡುಬಿದ್ರೆ, ಸುರೇಶ್‌ ಇರ್ವತ್ತೂರು ದಂಪತಿ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಮೈಸೂರು ಪೇಟ ತೊಡಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ಸಮ್ಮಾನಿತರಾದ ಬಿ. ಬಿ. ಚಂದ್ರಹಾಸ್‌ ಅವರು ಮಾತನಾಡಿ, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವುದರಿಂದ ಹಲವರ ಪರಿಚಯ ವಾಗುತ್ತದೆ. ಈ ರೀತಿಯ ಪರಿಚಯ ನಮ್ಮ ಬದುಕಿಗೆ ಪ್ರೇರಕವಾಗಿರುತ್ತದೆ. ಇಂದು ನನಗೆ ದಕ್ಕಿದ ಸಮ್ಮಾನ ಕೂಡಾ ಸಂಘ-ಸಂಸ್ಥೆಗಳಲ್ಲಿ ದುಡಿದ ಪ್ರತಿಫಲವಾಗಿದೆ ಎಂದರು.
ಇನ್ನೋರ್ವ ಸಮ್ಮಾನಿತ ಗಣೇಶ್‌ ರಾವ್‌ ಪಡುಬಿದ್ರೆ ಅವರು ಮಾತನಾಡಿ, ಕಿಶೋರ್‌ ಶೆಟ್ಟಿ ಪಿಲಾರ್‌ ಮುಂಬಯಿಯ ಎಲ್ಲಾ ರಂಗ ಕಲಾವಿದರ ಪಾಲಿಗೆ ಪಿಲಾರ್‌ ಆಗಿದ್ದಾರೆ. ಈ ಸಂದರ್ಭದಲ್ಲಿ ನನ್ನನ್ನು ರಂಗಕ್ಕೆ ಪರಿಚಯಿಸಿದ ರಹೀಂ ಸಚ್ಚೇರಿಪೇಟೆ ಮತ್ತು ಮಾರ್ಗದರ್ಶನ ನೀಡುತ್ತಿರುವ ಮನೋಹರ್‌ ಶೆಟ್ಟಿ ನಂದಳಿಕೆ ಅವರಿಗೆ ಮೊತ್ತ ಮೊದಲು ನಮನವನ್ನು  ಸಲ್ಲಿಸುತ್ತೇನೆ ಎಂದರು.
ಅವರು ಮಾತನಾಡಿ, ನನ್ನಂತಹ ಸಣ್ಣ ಕಲಾವಿದನನ್ನು ಗುರುತಿಸಿ, ಗಣ್ಯರ ಹಸ್ತದಿಂದ ಸಮ್ಮಾನಿಸಿ ಗೌರವಿಸಿದ ಕಿಶೋರ್‌ ಶೆಟ್ಟಿ ಪಿಲಾರ್‌ ಅವರಿಗೆ ಚಿರಋಣಿಯಾಗಿದ್ದೇನೆ ಎಂದು ರಂಗ ಕಲಾವಿದ ಸುರೇಶ್‌ ಇರ್ವತ್ತೂರು ನುಡಿದರು.

ಸಮಾರಂಭದ ವೇದಿಕೆಯಲ್ಲಿ ದಹಿಸರ್‌ ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಗುರುಶಂಕರ ಭಟ್‌, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಉಪಾಧ್ಯಕ್ಷ ಕಮಲಾಕ್ಷ ಸರಾಫ್‌, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಮೀರಾರೋಡ್‌ ಉದ್ಯಮಿ, ಬಿಜೆಪಿ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ವೀರ ಕೇಸರಿ ಕಲಾವೃಂದದ ಅಧ್ಯಕ್ಷ ಪ್ರೇಮನಾಥ್‌ ಸುವರ್ಣ, ನಮ ಜವನೆರ್‌ ಮೀರಾ-ಭಾಯಂದರ್‌ ಮತ್ತು ಶಿವಸೇನಾ ದಕ್ಷಿಣ ಭಾರತೀಯ ಘಟಕ ಮೀರಾ-ಭಾಯಂದರ್‌ ಅಧ್ಯಕ್ಷ ಚೇತನ್‌ ಮೂಡಬಿದ್ರೆ, ತುಳು ಸಂಘ ಬೊರಿವಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ ಪಯ್ನಾರು, ನ್ಯಾಯವಾದಿ ಸೌಮ್ಯಾ ಪೂಜಾರಿ ಮೊದಲಾವರು ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.

Advertisement

ಕಾಶಿಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ ಭಟ್‌, ದಹಿಸರ್‌ ರಾವಲ್ಪಾಡಾದ ಶ್ರೀ ದುರ್ಗಾಪರಮೇಶ್ವರಿ ಶನೀಶ್ವ ಮಂದಿರದ ಪ್ರಧಾನ ಅರ್ಚಕ ಶಂಕರ್‌ ಗುರು ಭಟ್‌ ಅವರು ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ-ಗಣ್ಯರನ್ನು ಕಾರ್ಯಕ್ರಮದ ಸಂಯೋಜಕರಾದ ಕಿಶೋರ್‌ ಶೆಟ್ಟಿ ಪಿಲಾರ್‌ ಮತ್ತು ನಂದಳಿಕೆ ಮನೋಹರ ಶೆಟ್ಟಿ, ರಾಜೇಶ್‌ ಕೋಟ್ಯಾನ್‌ ಹೆಜಮಾಡಿ, ಪ್ರಭಾಕರ ಬೆಳುವಾಯಿ, ಸುನಿತಾ ಸುವರ್ಣ, ಶುಭಾಂಗಿ ಎಸ್‌. ಶೆಟ್ಟಿ, ರಹೀಂ ಸಚ್ಚೇರಿಪೇಟೆ, ಉಮೇಶ್‌ ಹೆಗ್ಡೆ ಕಡ್ತಲ, ದಿವಾಕರ ಇರ್ವತ್ತೂರು ಮೊದಲಾದವರು ಶಾಲು ಹೊದೆಸಿ, ಪುಷ್ಪಗುತ್ಛ ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಗಣ್ಯರನ್ನು ಅಧ್ಯಕ್ಷ ರಾಜ್‌ಕುಮಾರ್‌ ಕಾರ್ನಾಡ್‌ ಗೌರವಿಸಿದರು. ಪ್ರವೀಣ್‌ ಶೆಟ್ಟಿ ಶಿಮಂತೂರು ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಯನಾ ಸಚಿನ್‌ ವಿರಚಿತ, ರಂಗಕರ್ಮಿ ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ರಂಗಮಿಲನ ಮುಂಬಯಿ ಕಲಾವಿದರಿಂದ ದಾದನ ಉಂಡುಗೆ ತುಳು ನಾಟಕ ಪ್ರದರ್ಶನಗೊಂಡಿತು.  

 ಕಲಾವಿದನಿಗೆ ಅವರಲ್ಲಿರುವ ಕಲೆಯೇ ಸಂಪತ್ತು. ನನ್ನ  ಈ ಸಮ್ಮಾನವನ್ನು ನನಗೆ ಜನ್ಮ ನೀಡಿದ ಮಾತಾಪಿತರಿಗೆ, ವಿದ್ಯೆ ನೀಡಿದ ಗುರುಗಳಿಗೆ, ಉದ್ಯೋಗ ನೀಡಿ ಬದುಕಿನ ಹಾದಿ ತೋರಿಸಿದ ಗಣ್ಯರಿಗೆ, ನಿರಂತರ ಮಾರ್ಗದರ್ಶನ ನೀಡುವ ನನ್ನ ಸಹೋದರ ಸಮಾನರಾದ ವಿಜಯ ಬಿ. ಹೆಗ್ಡೆ ಅವರಿಗೆ ಅರ್ಪಿಸುತ್ತಿದ್ದೇನೆ 
– ರವಿ ಹೆಗ್ಡೆ ಹೆರ್ಮುಂಡೆ (ರಂಗಕಲಾವಿದ, ಯಕ್ಷಗಾನ ಅರ್ಥದಾರಿ).

     ತಾವೆಲ್ಲರೂ ಪ್ರೀತಿಯಿಂದ ನೀಡುವ ಸಮ್ಮಾನಕ್ಕೆ ನಾನು ಅದೆಷ್ಟು ಅರ್ಹನಾಗಿದ್ದೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಈ ಮಟ್ಟಕ್ಕೆ ಬೆಳೆದು ನಿಂತಿದ್ದರೆ ಅದಕ್ಕೆ ಕಾರಣ ನನ್ನ ಪತ್ರಿಕೋದ್ಯಮದ ಪ್ರೀತಿ. ನಿಮ್ಮೆಲ್ಲರ ಅಭಿಮಾನಕ್ಕೆ ತಲೆಬಾಗುತ್ತೇನೆ. ಈ ಸಮ್ಮಾನವು ನನ್ನ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ 
– ಶ್ರೀಧರ ಉಚ್ಚಿಲ್‌ (ಪತ್ರಕರ್ತ ಅಂಕಣಕಾರ).

Advertisement

Udayavani is now on Telegram. Click here to join our channel and stay updated with the latest news.

Next