ಮುಂಬೈ: ಮಾಜಿ ಸಚಿವ ಮತ್ತು ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು ಬಾಬಾ ಸಿದ್ದೀಕಿ ಮೇಲೆ ಗುಂಡು ಹಾರಿಸಿದ ಬಳಿಕ ಅವರ ಸಾವನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯ ಹೊರಭಾಗದಲ್ಲಿ ಸುಮಾರು ಮೂವತ್ತು ನಿಮಿಷಗಳ ಕಾಲ ಕಾದು ಕುಳಿತಿದ್ದೆ ಎಂದು ಸಿದ್ದೀಕಿ ಹತ್ಯೆಯ ಪ್ರಮುಖ ಆರೋಪಿ ಶಿವ ಕುಮಾರ್ ಗೌತಮ್ ಪೊಲೀಸರ ವಿಚಾರಣೆ ವೇಳೆ ಮಾಹಿತಿ ಹೊರಹಾಕಿದ್ದಾನೆ.
ಅಕ್ಟೋಬರ್ 12 ರಂದು ರಾತ್ರಿ 9:11 ಕ್ಕೆ ಮುಂಬೈನ ಬಾಂದ್ರಾದಲ್ಲಿರುವ ಪುತ್ರನ ಕಚೇರಿ ಹೊರ ಭಾಗದಲ್ಲಿ ಪ್ರಮುಖ ಆರೋಪಿ ಶಿವ ಕುಮಾರ್ ಸೇರಿ ಮೂವರ ತಂಡ ಬಾಬಾ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು. ಇದಾದ ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಸಿದ್ದೀಕಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಬಾ ಸಿದ್ದೀಕಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಕೂಡಲೇ ತನ್ನ ವಸ್ತ್ರವನ್ನು ಬದಲಾಯಿಸಿಕೊಂಡು ಆಸ್ಪತ್ರೆಗೆ ಬಳಿ ಸೇರಿದ್ದ ಜನರ ಗುಂಪಿನ ನಡುವೆ ನಿಂತಿದ್ದೆ ಬಳಿಕ ಈ ವೇಳೆ ಸಿದ್ದೀಕಿ ಅವರ ಸ್ಥಿತಿ ಗಂಭೀರವಾಗಿದೆ ಎಂಬ ವಿಚಾರ ತಿಳಿದು ಬಳಿಕ ಅಲ್ಲಿಂದ ತೆರಳಿರುವುದಾಗಿ ಶಿವ ಕುಮಾರ್ ಹೇಳಿಕೊಂಡಿದ್ದ.
ಅಲ್ಲದೆ ಶಿವ ಕುಮಾರ್ ಹೇಳಿಕೆಯಂತೆ ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳಾದ ಧರ್ಮರಾಜ್ ಕಶ್ಯಪ್ ಮತ್ತು ಗುರ್ಮೈಲ್ ಸಿಂಗ್ ಅವರು ಉಜ್ಜಯಿನಿ ರೈಲು ನಿಲ್ದಾಣಕ್ಕೆ ತೆರಳಬೇಕಿತ್ತು ಅಲ್ಲಿ ಬಿಷ್ಣೋಯ್ ಗ್ಯಾಂಗ್ನ ಸದಸ್ಯರೊಬ್ಬರು ಅವರನ್ನು ವೈಷ್ಣೋ ದೇವಿಗೆ ಕರೆದೊಯ್ಯಬೇಕಿತ್ತು. ಆದರೆ ಕಶ್ಯಪ್ ಮತ್ತು ಸಿಂಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದರಿಂದ ಯೋಜನೆ ವಿಫಲವಾಯಿತು.
ಇದನ್ನೂ ಓದಿ: INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್