Advertisement

ಪೆರಿಯಾ ಏರ್‌ ಸ್ಟ್ರಿಪ್‌ ಯೋಜನೆಗೆ ಮತ್ತೆ ಜೀವ

03:40 AM Dec 08, 2018 | Karthik A |

ಕಾಸರಗೋಡು: ಕೆಲವು ವರ್ಷಗಳಿಂದ ಸಕ್ರಿಯ ಚರ್ಚಾ ವಿಷಯವಾಗಿದ್ದು, ಆ ಬಳಿಕ ಮೂಲೆಗುಂಪಾದ ಮಹತ್ವಾಕಾಂಕ್ಷೆಯ ಪೆರಿಯಾ ಏರ್‌ ಸ್ಟ್ರಿಪ್‌ ಯೋಜನೆಗೆ ಮತ್ತೆ ಜೀವ ಬಂದಿದೆ. ಏರ್‌ ಸ್ಟ್ರಿಪ್‌ ನಿರ್ಮಾಣ ಸಾಧ್ಯತೆಯ ಕುರಿತಾಗಿ ಅಧ್ಯಯನ ನಡೆಸಲು ಮಹೀಂದ್ರ ಗ್ರೂಪ್‌ ಅಧಿಕಾರಿಗಳು ನಿಗದಿತ ಯೋಜನೆಯ ಸ್ಥಳವಾದ ಪೆರಿಯಾಕ್ಕೆ ಭೇಟಿ ನೀಡಿದರು. ಈ ಮೂಲಕ ಕಡತಕ್ಕೆ ಸೇರಿದ್ದ ಏರ್‌ ಸ್ಟ್ರಿಪ್‌ ಯೋಜನೆಯ ಬಗ್ಗೆ ಮತ್ತೆ ನಿರೀಕ್ಷೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಮಹೀಂದ್ರ ಗ್ರೂಪ್‌ನ ಪಾಲುದಾರರಾಗಿರುವ ಏವಿಯೇಶನ್‌ ಆಪರೇಟರ್‌, ಮಹೀಂದ್ರ ಏರೋಸ್ಪೇಸ್‌ ಗ್ರೂಪ್‌ ಕ್ಯಾಪ್ಟನ್‌ ಆಗಿರುವ ಕೆ.ಎಂ. ಗೋಪಕುಮಾರ್‌ ನಾಯರ್‌ ನೇತೃತ್ವದಲ್ಲಿ ಯೋಜನೆಗೆ ಸ್ಥಳ ನಿಗದಿಪಡಿಸಿರುವ ಪೆರಿಯಾಕ್ಕೆ ಭೇಟಿ ನೀಡಿ ಸ್ಥಳವನ್ನು ವೀಕ್ಷಿಸಿದರು. ಅವರೊಂದಿಗೆ ಕಾಸರಗೋಡು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು, ಎಡಿಎಂ ಎನ್‌. ದೇವಿದಾಸ್‌, ವಿಲೇಜ್‌ ಆಫೀಸರ್‌ ರಾಜನ್‌ ಮೊದಲಾದವರಿದ್ದರು.

Advertisement

ಪೆರಿಯಾದಲ್ಲಿ ಮಿನಿ ವಿಮಾನಗಳನ್ನು ಲ್ಯಾಂಡ್‌ ಮಾಡಲು ಸಾಧ್ಯವಾಗುವಂತೆ ಏರ್‌ ಸ್ಟ್ರಿಪ್‌ ನಿರ್ಮಿಸುವ ಯೋಜನೆ ಸಾಧ್ಯತೆಯ ಕುರಿತು ಅಧ್ಯಯನ ನಡೆಸಲು ರಾಜ್ಯ ಸರಕಾರ ಮಹೀಂದ್ರ ಗ್ರೂಪ್‌ಗೆ ಜವಾಬ್ದಾರಿ ವಹಿಸಿತ್ತು. ಇದರ ಆಧಾರದಲ್ಲಿ ಕೆ.ಎಂ.ಗೋಪಕುಮಾರ್‌ ನಾಯರ್‌ ಸ್ಥಳಕ್ಕೆ ಭೇಟಿ ನೀಡಲು ಬಂದಿದ್ದು ಮಾತ್ರವಲ್ಲದೆ ಸ್ಥಳವನ್ನು ವೀಕ್ಷಿಸಿದರು. ಪೆರಿಯಾದಲ್ಲಿ ಏರ್‌ ಸ್ಟ್ರಿಪ್‌ಯೋಜನೆ ಸಾಕಾರಗೊಳಿಸುವ ಸಾಧ್ಯತೆಯ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಗೋಪಕುಮಾರ್‌ ನಾಯರ್‌ ಹೇಳಿದ್ದಾರೆ.

ಜಿಲ್ಲಾಧಿಕಾರಿ, ಬೇಕಲ್‌ ರೆಸಾರ್ಟ್‌ ಅಭಿವೃದ್ದಿ ಕಾರ್ಪೊರೆೇಶನ್‌ ಎಂ.ಡಿ., ವಿತ್ತ ಖಾತೆಯ ಕೊಚ್ಚಿನ್‌ ವಿಮಾನ ಕಂಪೆನಿಯಾಗಿರುವ ಸಿಯಾಲ್‌ನ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಸುಮಾರು 80 ಎಕರೆ ಸ್ಥಳವನ್ನು ಏರ್‌ ಸ್ಟ್ರಿಪ್‌ಗೆ ಕಾದಿರಿಸಲಾಗಿದೆ. 20 ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಈ ಯೋಜನೆ ಸಾಕಾರಗೊಂಡಲ್ಲಿ 45 ಪ್ರಯಾಣಿಕರಿರುವ ವಿಮಾನಗಳನ್ನು ಲ್ಯಾಂಡ್‌ ಮಾಡಲು ಸಾಧ್ಯವಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next