Advertisement

ಮಾಸ್ಟರ್‌ ಆಗಬೇಕಿದ್ದವ ಮ್ಯಾನೇಜರ್‌ ಆಗಿಬಿಟ್ಟೆ

07:29 PM Oct 13, 2020 | Suhan S |

ನಾನಾಗ ಚಿಕ್ಕವನಿದ್ದೆ, ಓದಿದ್ದು ಸರ್ಕಾರಿ ಶಾಲೆಯಲ್ಲಿ. ಆಗ ನನಗೆ “ಹೀರೋ’ ಅಂದರೆ ನಮ್ಮ ಶಿಕ್ಷಕರು! ಅವರ ಗತ್ತು,ಕಣ್ಣಲ್ಲೇ ಇಡುವ ಭಯ, ಇನ್ನೂ ಮೀರಿದರೆ ವಿದ್ಯಾರ್ಥಿಗ  ಮೈಮೇಲೆ ಆಡುವ “ಬೆತ್ತದ ನರ್ತನ! ಎಲ್ಲವೂ ನನ್ನನ್ನು ಆಕರ್ಷಿಸುತ್ತಿತ್ತು! ಗುರುಗಳ ಮಾತು, ನಡತೆ, ಸಾಮಾನ್ಯ ಉಡುಪು, ಬಡತನವಿದ್ದರೂ ಬಾಯ್ತುಂಬ ಇರುತ್ತಿದ್ದ ನಗು, ಅವರು ಹೇಳುತ್ತಿದ್ದ ನೀತಿ ಕಥೆಗಳು, ಅವರು ನಂಬಿಕೊಂಡು ಬಂದ ರೀತಿ ನೀತಿಗಳು, ಪಾಲಿಸುತ್ತಿದ್ದ ಆದರ್ಶ… ಒಂದಾ ಎರಡಾ? – ಇಂಥವೇ ಸಂಗತಿಗಳು, ಭವಿಷ್ಯದಲ್ಲಿ ನಾನೂ ಒಬ್ಬ ಶಿಕ್ಷಕ ಆಗಬೇಕು ಎಂಬ ಆಸೆಯನ್ನು ನನ್ನೊಳಗೆ ಬಿತ್ತಿದವು.

Advertisement

ನಮ್ಮ ತಂದೆ ಸಹ ಮಿಡ್ಲ್ ಸ್ಕೂಲ್‌ನ ಶಿಕ್ಷಕರು ಆಗಿದ್ದರಿಂದ, ಮುಂದೆ ನಾನೂ ಅವರಂತೆಯೇ ಶಿಕ್ಷಕನೇ ಆಗಬೇಕು ಎಂಬುದು ಗುರಿ ಮಾತ್ರ ಆಗದೆ, ಅದೊಂದು ಹುಚ್ಚಿನಂತೆ ಜೊತೆಯಾಯಿತು. ಆ ನಂತರದಲ್ಲಿ ಎಲ್ಲೆಡೆಯೂ ನನಗೆ ಶಿಕ್ಷಕರೇ ಕಾಣಿಸ ತೊಡಗಿದರು.ಕಣ್ಣು ಮುಚ್ಚಿದರೂ ಟೀಚರ್‌. ಶಾಲೆಗೆ ಹೋದರೂ ಟೀಚರ್‌. ಮನೆಯಲ್ಲಂತೂ ಸಾಕ್ಷಾತ್‌ ನಮ್ಮಪ್ಪನೇ ಟೀಚರ್‌! ಸರ್ವಂ ಶಿಕ್ಷಕಮಯಂ!

ಆಗ ನಾನು, ಟೀಚರ್‌ ಆಗಲು ಏನು ಓದಬೇಕು ಅಂತ ಪರಿಚಯದ ಹಲವರ ಬಳಿ ವಿಚಾರಿಸಿದೆ. ನನ್ನ ಮುಸ್ಲಿಂ ಗೆಳೆಯನೊಬ್ಬ-ಟಿಸಿಎಚ್‌ಕರೋಜಿ ಜಲ್ದಿ ಕಾಮ್‌ ಮಿಲ್ತಾ ಹೈ. ಹಮಾರ ಖಾನ್ದಾನ್‌ ಪೂರ ಟೀಚರ್‌ ಹೀ ಟೀಚರ್‌ ಅಂದ! ಮನೆಗೆ ಹೋಗಿ ಮುಂದೆ ನಾನೂ ಟೀಚರ್‌ ಆಗುತ್ತೇನೆ ಅಂತ ತಂದೆಯವರಿಗೆ ಹೇಳಿದೆ. ಅವರು ತಕ್ಷಣ- “”ಅಯ್ಯೋ ಬೇಡ ಬೇಡ, ನಾನು ಟೀಚರ್‌ ಆಗಿ ತುಂಬಾಕಷ್ಟದಲ್ಲಿ ಮನೆ ನಡೆಸುತ್ತಿರೋದುಕಾಣಿಸುತ್ತಿಲ್ವ? ನೀನಾದರೂ ಚೆನ್ನಾಗಿ ಓದಿ ದೊಡ್ಡಕೆಲಸಕ್ಕೆ ಹೋಗು ಅಂದರು.

ಆ ನಂತರದಲ್ಲಿ ನನ್ನ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿ-ಫಾರ್ಮಾ ನೂ ಆಯ್ತು. ಜೊತೆಗೆ ಡಿಗ್ರೀನು ಆಯ್ತು. ಬಿ.ಇಡಿ., ಮಾಡಿ ಟೀಚರ್‌ ಆಗಬೇಕು ಅಂತ ಮತ್ತೆ ಆಸೆಯಾಯಿತು. ಈ ವೇಳೆಗೆ, ನನ್ನನ್ನು ಮಾಸ್ಟರ್‌ ಡಿಗ್ರಿಗೆ ಸೇರಿಸಲು ತಂದೆಯವರು ರೆಡಿ ಆಗಿದ್ದರು.ಅವರನ್ನುಕಾಡಿ ಬೇಡಿ ಬಿ.ಇಡಿ.,ಗೆ ಸೇರಿದೆ. ನಂತರಕನ್ನಡದಲ್ಲಿ ಎಂ. ಎ. ಮಾಡಿದೆ. ಕನ್ನಡದಲ್ಲಿ ಎಂ. ಎ ಮಾಡಿದ ನಾನು, ಪ್ರೈವೇಟ್‌ ಶಿಕ್ಷಣ ಸಂಸ್ಥೆಗಳಲ್ಲಿ ಅನುಭವಿಸಿದ ನೋವು ನನ್ನ ಶತ್ರುಗಳಿಗೂ ಬೇಡ! ತುಂಬಾ ಆಸೆಪಟ್ಟು ಆಯ್ಕೆ ಮಾಡಿಕೊಂಡಿದ್ದ ಶಿಕ್ಷಕನ ವೃತ್ತಿಯಲ್ಲಿ ನೆಮ್ಮದಿಯೇ ಇಲ್ಲವಲ್ಲ ಅನ್ನಿಸಿತು.ಕಡೆಗೆ ಆ ಕೆಲಸ ಬಿಟ್ಟು, ಡಿ. ಫಾರ್ಮ ಸರ್ಟಿಫಿಕೇಟ್‌ನ ಆಧಾರದ ಮೇಲೆ ಒಂದು ದೊಡ್ಡ ಆಸ್ಪತ್ರೆಯಲ್ಲಿ ಮೆಡಿಕಲ್‌ ಸ್ಟೋರ್‌ ನಡೆಸುವ ಜವಾಬ್ದಾರಿ ವಹಿಸಿಕೊಂಡೆ. ಆಸ್ಪತ್ರೆಯ ಮ್ಯಾನೇಜ್‌ ಮೆಂಟ್‌ನ ದುರಾಸೆಗೆ ಸಾಥ್‌ ಕೊಡಲು ಮನಸ್ಸು ಒಪ್ಪದೇ, ಆ ಕೆಲಸವನ್ನೂ ಬಿಟ್ಟು ಬಂದೆ. ಈಗ ಒಂದು ದೊಡ್ಡ ಮೆಡಿಕಲ್‌ ಹೋಲ್‌ಸೇಲ್‌ಕಂಪನಿಯಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದೇನೆ.

ನನ್ನ ಕೈ ಕೆಳಗೆ 30 ಜನಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ನನಗೆ ತಿಳಿದ ಒಳ್ಳೆಯ ಮಾತುಗಳನ್ನು, ನೀತಿಯನ್ನು, ಬುದ್ಧಿ ಮಾತುಗಳನ್ನು ಶಿಕ್ಷಕನ ರೀತಿಹೇಳುತ್ತ, ಮನದೊಳಗಿನ ಆಸೆಯನ್ನು ನೆರವೇರಿಸಿಕೊಳ್ಳುತ್ತಿದ್ದೇನೆ! ಮಾಸ್ಟರ್‌ಆಗಬೇಕಾದವನು ಮ್ಯಾನೇಜರ್‌ಆದರೂ, ನನ್ನ ಮನದಾಸೆಯನ್ನು ಇನ್ನೂ ಮರೆಯಲಾಗಿಲ್ಲ! ಈ ಸಂದರ್ಭದಲ್ಲಿ ನನಗೆ ಡಾ.ರಾಜ್‌ ರವರ ಒಂದು ಹಾಡು ಜ್ಞಾಪಕಕ್ಕೆ ಬರುತ್ತೆ-ಆಸೆಯೆಂಬ ಬಿಸಿಲುಕುದುರೆ ಏಕೆ ಏರುವೆ, ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ, ಅವನ ನಿಯಮ ಮೀರಿ ಇಲ್ಲಿ ಏನು ಆಗದು, ನಾವು ಬಯಸಿದಂತೆ ಇಲ್ಲಿ ಏನು ನಡೆಯದು…!­

Advertisement

 

-ಮೆಡಿಕಲ್ಸ್ ಚಂದ್ರು, ತುಮಕೂರು.

Advertisement

Udayavani is now on Telegram. Click here to join our channel and stay updated with the latest news.

Next