ಮುದ್ದೇಬಿಹಾಳ: ದಲಿತ ಸಂಘಟನೆಗಳ ನೂರಾರು ಸದಸ್ಯರು ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡರ ಇಲ್ಲಿನ ಹುಡ್ಕೋ ನಿವಾಸಕ್ಕೆ ಮುತ್ತಿಗೆ ಹಾಕುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ದಲಿತ ಮುಖಂಡರನ್ನು ವಶಪಡಿಸಿಕೊಂಡು ಠಾಣೆಯಲ್ಲಿ ಇರಿಸಿದ್ದಾರೆ.
ನ್ಯಾ.ಸದಾಶಿವ ಆಯೋಗದ ವರದಿ ಅನುಸಾರ, ಸುಪ್ರಿಂ ಕೋರ್ಟ ತೀರ್ಮಾನದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ನ.22 ರಿಂದ ಬಾಗಲಕೋಟ ಜಿಲ್ಲೆಯ ಕೂಡಲಸಂಗಮ ಕ್ರಾಸನ ರಾಷ್ಟ್ರೀಯ ಹೆದ್ದಾರಿಯಿಂದ ಮುದ್ದೇಬಿಹಾಳದವರೆಗೆ ಪಾದಯಾತ್ರೆ ನಡೆಸಿದ್ದರು. ಭಾನುವಾರ ರಾತ್ರಿ ಪಾದಯಾತ್ರೆ ಮುದ್ದೇಬಿಹಾಳ ಪ್ರವೇಶಿಸಿತ್ತು. ಇಂದು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆದಿದ್ದವು. ಇದನ್ನರಿತ ಪೊಲೀಸರು ಪ್ರವಾಸಿ ಮಂದಿರದಲ್ಲಿದ್ದ ಮುಖಂಡರಾದ ಬಸವರಾಜ ಪೂಜಾರಿ, ಶೇಖರ ಆಲೂರ, ಆನಂದ ಮುದೂರ ಇನ್ನಿತರರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕದಂತೆ ಸೂಚಿಸಿದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ 150 ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತಗೆ ಆಗಮಿಸಿದ್ದು ಹೋರಾಟದ ಗಂಭೀರತೆ ಎತ್ತಿ ತೋರಿಸುವಂತಿತ್ತು. ಇತ್ತ ಅಂಬೇಡ್ಕರ್ ವೃತ್ತದಲ್ಲಿ ಸೇರಿರುವ ದಲಿತ ಸಂಘಟನೆಗಳ ನೂರಾರು ಸದಸ್ಯರು ತಮ್ಮ ನಾಯಕರ ಬರುವಿಕೆಗಾಗಿ ಕಾಯತೊಡಗಿದ್ದಾರೆ. ಠಾಣೆಯ ಎದುರೇ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಪೂಜಾರಿ ಅವರು ಪೊಲೀಸ್ ಬಲ ಬಳಸಿ ಶಾಸಕರು ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸಿದ್ದಾರೆ. ಹೋರಾಟ ಹತ್ತಿಕ್ಕಿದಷ್ಟು ಹುಮ್ಮಸ್ಸು ನಮಗೆ ಹೆಚ್ಚಾಗುತ್ತದೆ.
ಪೊಲೀಸರು ನಮ್ಮನ್ನ ತಡೆಯಬಹುದು ಆದರೆ ಹೋರಾಟ ಹತ್ತಿಕ್ಕುವುದು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು. ಏತನ್ಮಧ್ಯೆ ತಮ್ಮ ನಾಯಕರನ್ನು ಠಾಣೆಗೆ ಕರೆತಂದಿರುವ ಮಾಹಿತಿ ಅರಿತ ಹಲವು ಮುಖಂಡರು, ಸದಸ್ಯರು ಪೊಲೀಸ್ ಠಾಣೆ ಎದುರು ಸೇರಿ ತಮ್ಮ ನಾಯಕರನ್ನು ಬಿಟ್ಟು ಕಳಿಸುವಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇತ್ತ ಹುಡ್ಕೋದಲ್ಲಿರುವ ಶಾಸಕರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಬಸವನ ಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಇಲ್ಲಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಹಲವು ಸುತ್ತಿನ ಮಾತುಕತೆಯ ನಂತರ ಹುಡ್ಕೋದ ಹೇಮರಡ್ಡಿ ಮಲ್ಲಮ್ಮ ವೃತ್ತದವರೆಗೆ ಮಾತ್ರ ಪಾದಯಾತ್ರೆ ತೆರಳಿ ಅಲ್ಲಿಯೇ ಸಂಬಂಧಿಸಿದವರಿಗೆ ಮನವಿ ಸಲ್ಲಿಸಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ವೃತ್ತದಿಂದ ಮುಂದೆ ಅಂದಾಜು 300-400 ಮೀಟರ್ ಅಂತರದಲ್ಲಿರುವ ಶಾಸಕರ ನಿವಾಸಕ್ಕೆ ಹೋಗಲು ಬ್ಯಾರಿಕೇಡ್ ಹಾಕಿ ತಡೆ ಒಡ್ಡಲಾಗಿದೆ.
ಇದನ್ನೂ ಓದಿ: Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ