Advertisement

ಪೆರ್ಡೂರು: ಲಾರಿ ಪಲ್ಟಿ ; 3 ಸಾವು

01:59 PM Apr 30, 2018 | Harsha Rao |

ಹೆಬ್ರಿ: ಚಿತ್ರದುರ್ಗದಿಂದ ಉಡುಪಿಯತ್ತ ಸಾಗುತ್ತಿದ್ದ ಈಚರ್‌ ಲಾರಿ ಪೆರ್ಡೂರು ಚೌಂಡಿನಗರ ಬಳಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಚಿತ್ರದುರ್ಗದ ಮೂರ್ತಿ (40), ಅಸ್ಸಾಂ ಮೂಲದವರಾದ ಮೆಂಟ್ರೋ (30) ಮತ್ತು ಬೇಮನ್‌ (29) ಮೃತಪಟ್ಟವರು. ಮೂರ್ತಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಇಂದ್ರಜಿತ್‌, ಮುಸಿಲ್ಲಾ, ರವಿ, ಮೋಹನ್‌, ತಿಪ್ಪೇಸ್ವಾಮಿ, ಅಂಜನಪ್ಪ, ಉಮಾಕಾಂತ್‌ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ರವಿವಾರ ಬೆಳಗ್ಗೆ 7.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಚಾಲಕ ಪರಾರಿ
ಲಾರಿಯು ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ಚಿತ್ರದುರ್ಗದಿಂದ ಪೆಂಡಾಲ್‌ ಸಾಮಗ್ರಿಗಳನ್ನು ಹೇರಿಕೊಂಡು ಶನಿವಾರ ರಾತ್ರಿ 12 ಗಂಟೆಗೆ ಹೊರಟಿತ್ತು. ಲಾರಿಯಲ್ಲಿ ಚಾಲಕ ಸಹಿತ 14 ಮಂದಿ ಇದ್ದರು. ಚಾಲಕನೊಂದಿಗೆ ಇಬ್ಬರು ಕ್ಯಾಬಿನ್‌ನಲ್ಲಿ ಕುಳಿತಿದ್ದರೆ 11 ಮಂದಿ ಕಾರ್ಮಿಕರು ಹಿಂಬದಿಯಲ್ಲಿ ಪೆಂಡಾಲ್‌ ಸಾಮಗ್ರಿಗಳ ಮೇಲೆ  ಕುಳಿತಿದ್ದರು. ಲಾರಿ ಪಲ್ಟಿಯಾದಾಗ ಬೃಹತ್‌ ಗಾತ್ರದ ಕಬ್ಬಿಣದ ಸಾಮಗ್ರಿಗಳು ಅವರ ಮೇಲೆ ಬಿದ್ದು ಓರ್ವ ಉಸಿರುಕಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದರು. ಅಪಘಾತ ಸಂಭವಿಸಿದ ತತ್‌ಕ್ಷಣ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ತೀವ್ರತೆಗೆ ವಿದ್ಯುತ್‌ ಕಂಬ ತುಂಡಾಗಿದೆ.

ಯುವಕರ ತಂಡದ ನೆರವು
ಅಪಘಾತ ಸಂಭವಿಸಿದ ಕೂಡಲೇ ಪೆರ್ಡೂರು ಹಾಗೂ ಪಕ್ಕಾಲಿನ ಯುವಕರ ತಂಡ ಸ್ಥಳಕ್ಕೆ ಆಗಮಿಸಿ ಉಳಿದವರನ್ನು ಮೇಲಕ್ಕೆತುವ¤ಲ್ಲಿ ಸಹಕರಿಸಿದರು. ರಸ್ತೆಯಲ್ಲಿ ಬಿದ್ದಿದ್ದ ಕಬ್ಬಿಣದ ಸಾಮಗ್ರಿಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸಚಿವ ಪ್ರಮೋದ್‌ ಮಧ್ವರಾಜ್‌  ಅವರು ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಅಪಘಾತದ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Advertisement

ಹಿರಿಯಡಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next