Advertisement

ನೀರಿನ ಜತೆ ಜನರ ಹಣವೂ ಪೋಲು

12:53 AM May 12, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಪ್ರತಿ ಮುಂಗಾರಿಗೆ ಮಳೆ ಜತೆ ಸಾರ್ವಜನಿಕರ ಹಣ ಕೂಡ ನೀರಿನಂತೆ ಪೋಲಾಗುತ್ತದೆ! ಅದು- “ರಸ್ತೆ ದುರಸ್ತಿ’ ರೂಪದಲ್ಲಿ. ಸರಾಗವಾಗಿ ಮಳೆ ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದಿರುವುದರಿಂದ, ರಸ್ತೆಯಲ್ಲಿ ಗಂಟೆಗಟ್ಟಲೆ ನೀರು ನಿಲ್ಲುತ್ತಿದೆ. ಇದರಿಂದ ಡಾಂಬರು ಸಡಿಲಗೊಂಡು ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆ.

Advertisement

ಈ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ. ಮನಸ್ಸು ಮಾಡಿದರೆ, ಈ ಮಳೆ ನೀರನ್ನು ಹಿಡಿದಿಡುವ ಜತೆಗೆ ಸಾರ್ವಜನಿಕರ ಹಣವನ್ನೂ ಉಳಿಸಬಹುದು. ನಗರದಲ್ಲಿ ವಾರ್ಷಿಕ ಸುಮಾರು 977.4 ಮಿ.ಮೀ. ಮಳೆ ಬೀಳುತ್ತದೆ. ಅದರಲ್ಲಿ ನಗರದಾದ್ಯಂತ ವಿಸ್ತರಿಸಿರುವ 19 ಸಾವಿರ ಕಿ.ಮೀ. ಉದ್ದದ ಮುಖ್ಯರಸ್ತೆಗಳ ಮೇಲೆಯೇ ಶೇ.30ರಿಂದ 40ರಷ್ಟು ಮಳೆ ಬಿದ್ದು, ಆ ನೀರು ಪಕ್ಕದ ಚರಂಡಿಗಳನ್ನು ಸೇರುತ್ತದೆ. ಇದನ್ನು ಎರಡೂ ಬದಿಗಳಲ್ಲಿ ಸೂಕ್ತ ರೀತಿಯಲ್ಲಿ ಹಿಡಿದಿಡುವ ವ್ಯವಸ್ಥೆ ಆಗುತ್ತಿಲ್ಲ.

“ಮನೆಯ ಯಾವುದಾದರೂ ಮೂಲೆಯಲ್ಲಿ ಮಳೆ ನೀರು ನಿಂತರೆ ಗೋಡೆಯ ಚಕ್ಕೆಗಳು ಎದ್ದೇಳುವ ರೀತಿಯಲ್ಲೇ ನಗರದಲ್ಲಿ ರಸ್ತೆಗುಂಡಿಗಳು ಸೃಷ್ಟಿಯಾಗುತ್ತಿವೆ. ರಸ್ತೆಯಲ್ಲಿ ನೀರು ನಿಲ್ಲುವುದನ್ನು ಮೊದಲು ತಪ್ಪಿಸಬೇಕು. ಆದರೆ, ಅದಕ್ಕೆ ಬೇಕಾದ ಒಳಚರಂಡಿ ವ್ಯವಸ್ಥೆಯೇ ನಮ್ಮಲ್ಲಿ ಇಲ್ಲ. ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಗಂಟೆ ನೀರು ನಿಲ್ಲುವುದರಿಂದ ಡಾಂಬರು ಸಡಿಲಗೊಂಡು ಕಿತ್ತುಹೋಗುತ್ತದೆ. ಈ ಅವ್ಯವಸ್ಥೆಯಿಂದ ಅವಾಂತರಗಳು ಸೃಷ್ಟಿಯಾಗುತ್ತಿವೆ’ ಎಂದು ನಗರ ವಿನ್ಯಾಸ ತಜ್ಞ ನರೇಶ್‌ ನರಸಿಂಹನ್‌ ಬೇಸರ ವ್ಯಕ್ತಪಡಿಸುತ್ತಾರೆ.

“ನಿಯಗಳ ಪ್ರಕಾರ ರಸ್ತೆಗಳಲ್ಲಿ ಗುಂಡಿಗಳು ಬಿದ್ದರೆ, ಆ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರೇ ಸರಿಪಡಿಸಬೇಕು. ಆದರೆ, ಬಹುತೇಕ ಗುತ್ತಿಗೆದಾರರು ಬಿಬಿಎಂಪಿ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ, ಬಿಬಿಎಂಪಿ ಮತ್ತೆ ಬಿಲ್‌ ಮಾಡಿ ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿ ಹೇಳಿತ್ತಾರೆ. “ರಸ್ತೆ ಬದಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಬೇಕು ಎಂದು ನಿಯಮ ಹೊರಡಿಸಿಲ್ಲ.

ಆದರೆ, ಅದು ನಮ್ಮ ಆಶಯ ಅಷ್ಟೇ. ನಗರದಲ್ಲಿ ಹೊಸದಾಗಿ ನಿರ್ಮಿಸುವ ಮೇಲ್ಸೇತುವೆಗಳಲ್ಲಿ ಇದನ್ನು ಅಳವಡಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ (ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮೇಲ್ಸೇತುವೆ). ವೈಟ್‌ಟಾಪಿಂಗ್‌ ಸೇರಿದಂತೆ ಉಳಿದೆಲ್ಲ ರಸ್ತೆಗಳಿಗೂ ಇದು ಮಾದರಿ ಆಗಬೇಕು. ಇದರಿಂದ ರಸ್ತೆಗಳ ಬಾಳಿಕೆ ಅವಧಿ ಹೆಚ್ಚಾಗುತ್ತದೆ. ನೀರಿನ ಉಳಿತಾಯವೂ ಆಗುತ್ತದೆ’ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿ ಡಾ.ಅನಂತಕುಮಾರ್‌ ಅರಸ್‌ ತಿಳಿಸುತ್ತಾರೆ.

Advertisement

ಸಮಸ್ಯೆಯ ಮೂಲ ಯಾವುದು?: ಮಳೆ ನೀರು ಮತ್ತು ಒಳಚರಂಡಿ ನೀರು ಪ್ರತ್ಯೇಕವಾಗಿ ಹರಿಯಲು ವ್ಯವಸ್ಥೆ ಮಾಡದಿರುವುದೇ ಮಳೆ ನೀರು ರಸ್ತೆಯಲ್ಲೇ ನಿಲ್ಲಲು ಕಾರಣ ಎನ್ನುತ್ತಾರೆ ತಜ್ಞರು. ಒಳ ಚರಂಡಿ ನೀರಿನಲ್ಲೇ ಮಳೆ ನೀರು ಸೇರಿಕೊಂಡು ಹರಿಯುತ್ತದೆ. ನೀರು ಹರಿಯುವ ರಭಸ ಹೆಚ್ಚಾದಂತೆ ಒಳಚರಂಡಿ ನೀರೂ ರಸ್ತೆ ಸೇರಿಕೊಳ್ಳುತ್ತದೆ.

ಇದರಿಂದ ಮಳೆ ನೀರು ಪೋಲು ಹಾಗೂ ಕೆರೆಗಳಿಗೆ ಕಲುಷಿತ ನೀರು ಸೇರುವುದರ ಜತೆಗೆ ರಸ್ತೆ ಸಹ ಹಾಳಾಗುತ್ತದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು. ಈಗ ಬಳಸುತ್ತಿರುವ ತಂತ್ರಜ್ಞಾನವೇ ಹಳೆಯದಾಗಿದೆ. ಪ್ರತ್ಯೇಕ ವ್ಯವಸ್ಥೆಯನ್ನು ಮಾಡದಿದ್ದರೆ ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುತ್ತಾರೆ ತಜ್ಞರು.

400 ಕಿ.ಮೀ ರಸ್ತೆಯಲ್ಲಿ ಗುಂಡಿ ಬೀಳಲಿವೆ!: ಈಗಾಗಲೇ ಗುಂಡಿ ಬಿದ್ದಿರುವ ರಸ್ತೆಗಳನ್ನು ಮುಚ್ಚುವುದು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 400 ಕಿ.ಮೀ ರಸ್ತೆಯಲ್ಲಿ ಗುಂಡಿ ಬೀಳುವ ಸಾಧ್ಯತೆಗಳಿವೆ ಎಂದು ಗುರುತಿಸಲಾಗಿದ್ದು, ಮಳೆಗಾಲಕ್ಕೆ ಆ ರಸ್ತೆಗಳ ದುರಸ್ತಿಗೆ ಪಾಲಿಕೆ ಮತ್ತೆ ಹಣ ವ್ಯಯಿಸಲಿದೆ.

ನೀರು ಉಳಿಸಲು ಇನ್ನೂ ಇದೆ ಅವಕಾಶ: ಮಹತ್ವಾಕಾಂಕ್ಷಿ ವೈಟ್‌ಟಾಪಿಂಗ್‌ ಯೋಜನೆ ಪ್ರಗತಿಯಲ್ಲಿದ್ದು, ಆ ಕಾಮಗಾರಿ ನಡೆದ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಿಸಲು ಅವಕಾಶ ಇತ್ತು. ಅದನ್ನೂ ಬಿಬಿಎಂಪಿ ನಿರ್ಲಕ್ಷಿಸಿದೆ. ನಗರದಲ್ಲಿ ಕೋಟ್ಯಂತರ ವೆಚ್ಚ ಮಾಡಿ ಬಿಬಿಎಂಪಿ ವೈಟ್‌ಟಾಪಿಂಗ್‌ ಕಾಮಗಾರಿ ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 39.80 ಕಿ.ಮೀ, ಎರಡನೇ ಹಂತದಲ್ಲಿ 40 ರಸ್ತೆಗಳು

ಮತ್ತು ಮೂರನೇ ಹಂತದಲ್ಲಿ 89 ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಿಸಲು ಮತ್ತು ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬಹುದು. ಆ ಮೂಲಕ ಉಳಿದ ರಸ್ತೆಗಳಲ್ಲಾದರೂ ಮಳೆ ನೀರು ಉಳಿಸುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ ತಜ್ಞರು.

ಫ್ಲೈಓವರ್‌ಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿ: ಮಳೆ ಬಂದಾಗ ನಗರದಲ್ಲಿರುವ ಫ್ಲೈಓವರ್‌ಗಳ ಮೇಲೂ ನೀರು ಸಂಗ್ರಹವಾಗುತ್ತದೆ. ಈ ನೀರು ಮತ್ತೆ ಮೋರಿ ಸೇರುವ ಮೂಲಕ ಅಪಾರ ಪ್ರಮಾಣದಲ್ಲಿ ಪೋಲಾಗುತ್ತಿದೆ. ಇಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೆ ಕಡ್ಡಾಯ ಮಾಡಬೇಕು. ಇದರಿಂದ ಫ್ಲೈಓವರ್‌ಗಳ ಕೆಳಗಡೆ ಇರುವ ಸಸಿಗಳಿಗೆ ನೀರು ಸಿಗುತ್ತದೆ.

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next