ಸುರಪುರ: ಕೋವಿಡ್ ಮಹಾಮಾರಿ ತಡೆಗಟ್ಟಲು ಅಧಿಕಾರಿಗಳಷ್ಟೆ ಶ್ರಮಿಸಿದರೆ ಸಾಲದು. ಇದಕ್ಕೆ ಸಮುದಾಗಳ ಸಹಭಾಗಿತ್ವ ಅಗತ್ಯ ವಾಗಿದೆ. ಕೋವಿಡ್ ವಾರಿಯರ್ಸ್ ಗೆ ಪ್ರತಿಯೊಬ್ಬರು ಸಂಪೂರ್ಣ ಸಹಕಾರ ನೀಡಬೇಕು. ಅಂದಾಗಲೆ ನಾವು ಕೋವಿಡ್ ವಿರುದ್ಧ ಜಯಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.
ನಗರದ ಕುಂಬಾರಪೇಟೆಯಲ್ಲಿರುವ ಪ್ರೇರಣಾ ಶಾಲೆಯಲ್ಲಿ ಸೋಮವಾರ ಕೊರೊನಾ ವಾರಿರ್ಯರ್ಗೆ ಹಮ್ಮಿಕೊಂಡಿದ್ದ ಆರೋಗ್ಯ ಸೇತು ಕ್ವಾರಂಟೈನ್ ಮೊಬೈಲ್ ಆ್ಯಪ್ ಶಿಬಿರದಲ್ಲಿ ಅವರು ಮಾತನಾಡಿದರು. ಹಸಿರು ವಲಯವಿದ್ದ ಜಿಲ್ಲೆ ಈಗ ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೆ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆ. ಎಲ್ಲರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹೊರರಾಜ್ಯಗಳಿಂದ ಬರುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಬೇಕು. ಮುಲಾಜಿಲ್ಲದೆ ಕ್ವಾರಂಟೈನ್ ಮಾಡಿಸಬೇಕು ಎಂದು ಹೇಳಿದರು.
ಕ್ವಾರಂಟೈನ್‌ನಲ್ಲಿ ಇರುವವರಿಗೆ ಮೂಲಸೌಲಭ್ಯ ಒದಗಿಸಲಾಗುತ್ತಿದೆ. 22 ತಂಡ ರಚಿಸಿ 16 ಸಾವಿರ ಜನರಗಂಟಲು ದ್ರಾವಣ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. ನಮ್ಮಲ್ಲಿ ಪರೀಕ್ಷೆ ವ್ಯವಸ್ಥೆ ಇಲ್ಲದೆ ಇರುವುದರಿಂದ ವರದಿ ಬರುವಲ್ಲಿ ವಿಳಂಬವಾಗುತ್ತಿದೆ. 14 ದಿನ ಕ್ವಾರಂಟೈನ್ ಮುಗಿದ ಬಳಿಕವು ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಹೇಳಿದರು.
ಶಾಸಕ ನರಸಿಂಹನಾಯಕ (ರಾಜೂಗೌಡ) ಮಾತನಾಡಿ ಗಡಿಯಲ್ಲಿ ಸೈನಿಕರು ಕಾರ್ಯನಿರ್ವಹಿ ಸುವಂತೆ ತಾಲೂಕಿನ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಜೀವನದ ಹಂಗು ತೊರೆದು ಹೋರಾಟ ಮಾಡಿದರ ಫಲವಾಗಿ ಶೇ. 80ರಷ್ಟು ಯಶಸ್ವಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಆಯುಷ್ ಆರೋಗ್ಯ ಇಲಾಖೆಯಿಂದ ರೋಗ ನಿರೋಧಕ ಹೆಚ್ಚಿಸುವ ಔಷಧವನ್ನು ಕೋವಿಡ್ ವಾರಿಯರ್ಸ್ ವಿತರಿಸಲಾಯಿತು. ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ, ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ, ತಹಶೀಲ್ದಾರ್ ನಿಂಗಣ್ಣ ಬಿರಾದಾರ, ತಾಲೂಕು ಆರೋಗ್ಯ ಅಧಿಕಾರಿ ಡಾ| ಆರ್.ವಿ. ನಾಯಕ, ಆಯುಷ್ ಜಿಲ್ಲಾಧಿಕಾರಿ ಪ್ರಕಾಶ ಆಶಾಪುರ, ಜಿಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ, ದೊಡ್ಡದೇಸಾಯಿ ದೇವರಗೋನಾಲ, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒ ಸೇರಿದಂತೆ ಕೊರೋನಾ ವಾರಿಯರ್ ಇದ್ದರು.