ದಾವಣಗೆರೆ: ಬೆಳಗಾವಿಯಲ್ಲಿ ಭಾನುವಾರ ಒಂದೇ ಮನಸ್ಸಿನವರು ಒಂದೆಡೆ ಸೇರಿ ಪಕ್ಷ ಕಟ್ಟುವ, ಮುಂದೆ ರಾಜ್ಯದ ಅಧಿಕಾರವನ್ನು ಮತ್ತೆ ಬಿಜೆಪಿ ಕೈಗೆ ತೆಗೆದುಕೊಳ್ಳಬೇಕಾದ ಕಾರ್ಯಕ್ರಮ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಅದು ಸಭೆಯಲ್ಲ. ಒಂದೇ ಮನಸ್ಸಿನವರು ಚರ್ಚೆ ಮಾಡಲು ಸೇರಿದ್ದೆವು ಎಂದು ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೊಮ್ಮೆ ಸಭೆಯೇ ಆಗಿದ್ದರೆ ಐವತ್ತು ಅರವತ್ತು ಜನರು ಸೇರುತ್ತಿದ್ದೆವು. ಮುಂದೆ ಬೆಂಗಳೂರಿನಲ್ಲಿ ಒಂದೇ ಮನಸ್ಸಿನವರು ಸೇರಿ ಮತ್ತೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪಕ್ಷದ ಹೈಕಮಾಂಡ್ ಗೆ ನಮ್ಮ ವಿಚಾರಗಳನ್ನು ಗಮನಕ್ಕೆ ತರುತ್ತೇವೆ. ಹೈಕಮಾಂಡ್ ಒಪ್ಪಿದರೆ ಮಾತ್ರವೇ ಕಾರ್ಯಕ್ರಮಗಳ ಮುಂದುವರಿಸುತ್ತೇವೆ. ನಾವು ಯಾವುದೇ ಬ್ಲಾಕ್ ಮೇಲ್ ಮಾಡುತ್ತಿಲ್ಲ ಎಂದು ತಿಳಿಸಿದರು.
ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾರೋಪದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಹೇ ವಿಜಯೇಂದ್ರ ನೀನು ಎಂಎಲ್ ಎ ಆಗಿರುವುದು ಕಾಂಗ್ರೆಸ್ ನೀಡಿದ ಭಿಕ್ಷೆಯಿಂದ. ನಾಗರಾಜಗೌಡನನ್ನು ಇಳಿಸಿದ್ದರೆ ನೀನು ಎಂಎಲ್ ಎ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರಿಗೆ ಕಾಂಗ್ರೆಸ್ ನೀಡಿರುವ ಭಿಕ್ಷೆ ಬೇಕಾಗಿಲ್ಲ. ಕೂಡಲೇ ರಾಜೀನಾಮೆ ನೀಡಿ, ಮತ್ತೊಮ್ಮೆ ಸ್ಪರ್ಧೆ ಮಾಡಿ, ಕಾಂಗ್ರೆಸ್ ಮುಖಕ್ಕೆ ಹೊಡೆಯುವಂತೆ ಗೆದ್ದು ಬರಬೇಕು. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಾನು ಅನೇಕ ಬಾರಿ ಪಕ್ಷಗಳ ಮುಖಂಡರ ನಡುವೆ ಮ್ಯಾಚ್ ಫಿಕ್ಸಿಂಗ್, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ಹೇಳುತ್ತಿದ್ದೆ. ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ನೋಡಿದರೆ ನಾನು ಈ ಹಿಂದೆ ಹೇಳಿದ್ದು ಸರಿ ಎಂಬುದು ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಂಸದ ಡಿ.ಕೆ. ಸುರೇಶ್ ಸಹ ಯಡಿಯೂರಪ್ಪ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಇಬ್ಬರೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಬ್ಲಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು. ಯಾವುದೇ ಪಕ್ಷದವರೇ ಆಗಿರಲಿ ಬ್ಲಾಕ್ ಮೇಲ್, ಮ್ಯಾಚ್ ಫಿಕ್ಸಿಂಗ್, ಹೊಂದಾಣಿಕೆ ರಾಜಕೀಯ ಮಾಡಿದ್ದರೆ ಎಲ್ಲರಿಗೂ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು 60 ಕಾಡು ಪ್ರಾಣಿಗಳ ಸಾಕಿದ್ದರೂ ಯಾವುದೇ ಶಿಕ್ಷೆಯೂ ಆಗಲಿಲ್ಲ. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ. ಅವರ ಪಕ್ಷದ ನಾಯಕರು ಅವರ ತಪ್ಪುಗಳನ್ನು, ಅವರ ಪಕ್ಷದ ನಾಯಕರು ನಮ್ಮ ಪಕ್ಷದ ನಾಯಕರ ತಪ್ಪುಗಳನ್ನು ಮುಚ್ಚಿ ಹಾಕುವ ಕೆಲಸ ಮಾಡಿದ್ದರಿಂದಲೇ ಮಲ್ಲಿಕಾರ್ಜುನ್ ಅವರಿಗೆ ಶಿಕ್ಷೆ ಆಗಲಿಲ್ಲ ಎಂದರು.