ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ರಾಯಚೂರು ಜಿಲ್ಲೆ ತೆಲಂಗಾಣಕ್ಕೆ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದೆ ಎಂಬಂತೆ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳನ್ನು ಕೆರಳಿಸುವ, ಭಾಷಾ ಬಾಂಧವ್ಯ, ನೆರೆ ಹೊರೆ ರಾಜ್ಯಗಳ ಉತ್ತಮ ಸಂಬಂಧಕ್ಕೆ ಧಕ್ಕೆ ತರುವ ಯತ್ನಕ್ಕೆ ಮುಂದಾಗಿದ್ದಾರೆ.
ಆ ಮೂಲಕ ಕನ್ನಡಿಗರ ಆತ್ಮಾಭಿಮಾನ ಕೆಣಕುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರಾಯಚೂರು ಎಂದರೆ ಕನಿಷ್ಟ ಅಭಿವೃದ್ಧಿಯನ್ನೇ ಕಾಣದ ನರಕರೂಪದ ನೆಲದಂತೆ, ತೆಲಂಗಾಣವೆಂದರೆ ಸ್ವರ್ಗದ ಪ್ರತಿರೂಪ ಎಂಬಂತೆ ಬಿಂಬಿಸುವ ಮೂಲಕ ರಾಜಕೀಯ ಲಾಭಕ್ಕೆ ಮುಂದಾಗಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು, ಅದನ್ನು ಪಡೆಯದೆ ಬಿಡಲಾರೆವು ಎಂದು ಸಮಯ ಸಿಕ್ಕಾಗಲೆಲ್ಲ ಕೇಳಿಬರುವ ಕೂಗು ಬರುಬರುತ್ತ ಸವಕಲು ನಾಣ್ಯವಾಗಿದೆ. ಕನ್ನಡಿಗರು, ಮರಾಠಿಗರು ಬೆಳಗಾವಿಯಲ್ಲಿ ಸಹೋದರರಂತೆ ಬಾಳುತ್ತಿದ್ದರೂ ವರ್ಷಕ್ಕೊಮ್ಮೆಯಾದರೂ ಬಾಂಧವ್ಯಕ್ಕೆ ಹುಳಿ ಹಿಂಡುವ ಕಾರ್ಯ ಮಹಾರಾಷ್ಟ್ರದ ಕೆಲವರಿಂದ ನಡೆಯುತ್ತಲೇ ಇದೆ. ಇದೀಗ ನೆರೆಯ ತೆಲಂಗಾಣದಿಂದ ಇಂತಹದ್ದೇ ಹೊಸ ವರಸೆ ಶುರುವಾಗಿದೆ. ವರ್ಷದ ಹಿಂದೆ ರಾಯಚೂರಿನ ಶಾಸಕರು ಮಾತಿನ ಆವೇಶದಲ್ಲಿ ಹೇಳಿದ ಒಂದೇ ಒಂದು ಶಬ್ದವನ್ನು ಮೂಲವಾಗಿಟ್ಟುಕೊಂಡು ತೆಲಂಗಾಣದಲ್ಲಿನ ಆಡಳಿತರೂಢ ಟಿಆರ್‌ಎಸ್ ನಾಯಕರು ರಾಯಚೂರು ತೆಲಂಗಾಣಕ್ಕೆ ಸೇರಿಯೇ ಬಿಟ್ಟಿತು ಎಂಬರ್ಥದಲ್ಲಿ, ರಾಯಚೂರು ಜಿಲ್ಲೆಯ ಇಡೀ ಜನತೆ ತೆಲಂಗಾಣಕ್ಕೆ ಹೋಗಲು ನಾವು ಸಿದ್ಧ ಎಂದು ಒಕ್ಕೊರಲಿನ ಧ್ವನಿ ಮೊಳಗಿಸಿದ್ದಾರೆ, ಬೇಡಿಕೆ ಮಂಡಿಸಿದ್ದಾರೆ, ಒತ್ತಾಯ ಮಾಡುತ್ತಿದ್ದಾರೆ ಎಂಬಂತೆ ಹೇಳಿಕೆ ನೀಡಿದ್ದಾರೆ.
ರಾಯಚೂರು ಕನ್ನಡ ನೆಲ ಎಂಬುದರಲ್ಲಿ ಸಂಶಯ ಇಲ್ಲವೇ ಇಲ್ಲ. ತೆಲಂಗಾಣ ಗಡಿಗೆ ಹೊಂದಿಕೊಂಡ ಕೆಲ ಹಳ್ಳಿಗಳಲ್ಲಿ ಹೆಚ್ಚಿನವರು ತೆಲುಗು ಭಾಷೆ ಮಾತನಾಡುತ್ತಿರಬಹುದು. ಅದೇ ರೀತಿ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತೆಲಂಗಾಣದ ಅನೇಕ ಗ್ರಾಮಗಳಲ್ಲಿ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದೂ ನಿಜ.
ಹೈದರಾಬಾದ್ ನಿಜಾಮರ ಕಪಿಮುಷ್ಟಿಯಿಂದ ಹೊರಬರಲು, ರಜಾಕರ ದುರಾಳಿತದ ವಿರುದ್ಧ ತೊಡೆತಟ್ಟಿ ನಿಂತ ಹೈದರಾಬಾದ್ ಕರ್ನಾಟಕ (ಇಂದಿನ ಕಲ್ಯಾಣ ಕರ್ನಾಟಕ) ವಿಮೋಚನಾ ಹೋರಾಟಕ್ಕೆ ತನ್ನದೇ ಮಹತ್ವದ ಕೊಡುಗೆ ನೀಡಿದ ಕೀರ್ತಿ ರಾಯಚೂರಿಗೆ ಇದೆ. ರಾಯಚೂರು ತೆಲಂಗಾಣಕ್ಕೆ ಸೇರಲು ಸಿದ್ಧವಿದೆ ಎಂದು ನಿರ್ಣಯ ಕೈಗೊಂಡ, ಠರಾವು ಪಾಸು ಮಾಡಿದ್ದೇನಾದರೂ ಇದೆಯೇ?
ತೆಲಂಗಾಣಕ್ಕೆ ಸೇರುವುದಾಗಿ ಮಹಾರಾಷ್ಟ್ರದ ಗಡಿ ಭಾಗದ ಕೆಲ ಹಳ್ಳಿಗಳು ನಿರ್ಣಯ ಕೈಗೊಂಡಂತೆ, ಅದೇ ಮಹಾರಾಷ್ಟ್ರದ ಗಡಿಭಾಗದ ಅನೇಕ ಹಳ್ಳಿಗಳು ಕರ್ನಾಟಕಕ್ಕೆ ಸೇರಲು ಸಿದ್ಧ ನಮ್ಮನ್ನು ಸೇರಿಸಿಕೊಳ್ಳಿ ಎಂದು ಮನವಿ ಮಾಡಿವೆ. ಅಷ್ಟೇ ಏಕೆ ಆಂಧ್ರಪ್ರದೇಶದ ಶಾಸಕರೊಬ್ಬರು ಮಂತ್ರಾಲಯವನ್ನು ಕರ್ನಾಟಕ ಸೇರಿಸಿಬಿಡಿ ಎಂದಿದ್ದರು. ಆವೇಶದಲ್ಲಿ ಬರುವ ಹೇಳಿಕೆ ಆಧರಿಸಿ, ಜಿಲ್ಲೆಯ ಜನತೆಯ ನಿರ್ಣಯವೇ ಇದಾಗಿದೆ ಎಂಬಂತೆ ಹೇಳಿಕೆ ನೀಡುವುದು ತರವಲ್ಲ. ಈ ಹೇಳಿಕೆ ವಿರುದ್ಧ ರಾಜ್ಯದ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಜನಪ್ರತಿನಿಧಿಗಳು ದನಿ ಎತ್ತಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂಥ ಹೇಳಿಕೆಗಳು ಮತ್ತಷ್ಟು ದುಬಾರಿಯಾಗಿ ಪರಿಣಮಿಸಬಹುದು. ಇಂಥ ವಿಭಜಕ ಮನಸ್ಥಿತಿಯನ್ನು ಆರಂಭದಲ್ಲೇ ಮೊಟಕುಗೊಳಿಸಬೇಕು.