Advertisement

ಬೀದಿನಾಯಿ ಉಪಟಳದಿಂದ ಜನ ತತ್ತರ

08:49 PM Jan 11, 2020 | Lakshmi GovindaRaj |

ಹುಳಿಯಾರು: ಬೀದಿ ನಾಯಿಗಳ ಹಾವಳಿಗೆ ಹುಳಿಯಾರು ನಿವಾಸಿಗಳು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ, ಅಂಗಡಿ, ಮನೆ, ಬಸ್‌ ನಿಲ್ದಾಣ ಹೀಗೆ ಎಲ್ಲಿ ಹೋದರೂ ನಾಯಿಗಳದ್ದೇ ಕಿರಿಕಿರಿ, ಓಡಾಡುವುದಕ್ಕೆ ಜನ ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಓಡಾಡುವ ನಾಗರಿಕರು ಹಾಗೂ ವಾಹನ ಸವಾರರನ್ನು ನಾಯಿಗಳು ಹಿಂಡು ಹಿಂಡಾಗಿ ಬೆನ್ನತ್ತುತ್ತವೆ. ಮೇಲೆ ಎಗರುವಂತೆ ಬಂದು ಭಯಗೊಳಿಸುತ್ತಿವೆ.

Advertisement

ನಾಯಿಗಳನ್ನು ಕಂಡು ಓಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಓಡಿದವರು ಎಡವಿ ಬಿದ್ದು ಗಾಯ ಮಾಡಿಕೊಳ್ಳಬೇಕು ಇಲ್ಲ ನಾಯಿಗಳಿಂದ ಕಚ್ಚಿಸಿಕೊಳ್ಳಬೇಕು ಎನ್ನುವಂತ ಸ್ಥಿತಿ ಇದೆ. ರಾತ್ರಿ ಹೊತ್ತಿನಲ್ಲಿ ಕೂಗಾಟದಿಂದ ಜನರಿಗೆ ಜಾಗರಣೆ ತಪ್ಪಿದ್ದಲ್ಲ. ಮನೆ ಬಾಗಿಲ ಬಳಿಯೇ ಬಂದು ಕಿತ್ತಾಡುತ್ತವೆ. ಒಂದು ಮನೆಯವರು ಓಡಿಸಿದ ತಕ್ಷಣ ಮತ್ತೂಂದು ಮನೆ ಮುಂದೆ ಕಚ್ಚಾಡುತ್ತವೆ. ಹೀಗೆ ಇವುಗಳ ಉಪಟಳಕ್ಕೆ ಜನರು ಸುಸ್ತಾಗಿ ಹೋಗಿದ್ದಾರೆ.

ಮಕ್ಕಳ ಮೇಲೆ ಎರಗುತ್ತವೆ: ಮಾಂಸದಂಗಡಿಗಳು, ಮಾಂಸದ ಹೋಟೆಲ್‌ಗ‌ಳು, ತಳ್ಳುವ ಗಾಡಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾರುಬಾರು ಜೋರಾಗಿವೆ. ಈ ಅಂಗಡಿಗಳ ತ್ಯಾಜ್ಯ ಎಸೆಯುವ ಕಡೆಗಳಲ್ಲಿ ಮುತ್ತಿಕೊಂಡಿರುತ್ತವೆ. ತಾಜ್ಯ ರಾಶಿ ಎಳೆದಾಡಿ ಅಳಿದುಳಿದ ಮೂಳೆ, ಮಾಂಸಕ್ಕಾಗಿ ಪೈಪೋಟಿಗೆ ಬಿದ್ದು ಕಚ್ಚಾಡುತ್ತವೆ. ಇನ್ನು ವಾಯುವಿಹಾರಿಗಳಿಗೂ ನಾಯಿಗಳ ಕಾಟ ತಪ್ಪಿಲ್ಲ. ಕುರುಕಲು ತಿನಿಸು ಹಿಡಿದು ಸಾಗುವ ಮಕ್ಕಳ ಮೇಲೆ ಎರಗಿದ ನಿದರ್ಶನಗಳಿವೆ.

ಮನೆಗಳ ಬಳಿ, ರಸ್ತೆಗಳಲ್ಲಿ, ಸಂದಿಗೊಂದಿಗಳಲ್ಲಿ ಮಲಗಿರುತ್ತವೆ. ಒಂದೇ ಸಮನೆ ಅರಚುವುದು, ಬೊಗಳುವುದು ಮಾಡುತ್ತವೆ. ಇದು ಜನರಿಗೆ ನೆಮ್ಮದಿಗೆ ಭಂಗ ತರುತ್ತಿದೆ. ಮನೆ ಆಸುಪಾಸಿನಲ್ಲಿ ನಾಯಿಗಳ ಚಲನವಲನಗಳ ಮೇಲೆ ಪೋಷಕರು ಸದಾ ಕಣ್ಣಿಟ್ಟಿರಲೇಬೇಕು. ಶಾಲಾ ವಾಹನ ಬರುವ ಸ್ಥಳದವರೆಗೂ ಪೋಷಕರೂ ಮಕ್ಕಳನ್ನು ಜೊತೆಯಲ್ಲಿ ಹೋಗಿ ಹತ್ತಿಸಬೇಕಾಗಿದೆ. ರಸ್ತೆಗಳಲ್ಲಿ ನಾಯಿಗಳು ಬೀಡುಬಿಟ್ಟಿದ್ದು, ವಾಹನಗಳಿಗೆ ಅಡ್ಡ ಬಂದು ಸಂಚಾರಕ್ಕೆ ಅಡ್ಡಿ ಮಾಡುವ ಜೊತೆಗೆ ಅಪಘಾತಕ್ಕೂ ಕಾರಣವಾಗುತ್ತಿವೆ.

ಹಗಲೆಲ್ಲ ದುಡಿದು ಬರುವ ನಾವು ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಲು ನಾಯಿಗಳು ಬಿಡುವುದಿಲ್ಲ. ಮಕ್ಕಳಂತೂ ನಾಯಿಗಳ ಕಿರುಚಾಟಕ್ಕೆ ಬೆಚ್ಚಿ ಬಿದ್ದು ಅಳುತ್ತಾರೆ. ನಾಯಿಗಳ ಕಾಟಕ್ಕೆ ನೆಮ್ಮದಿ ಇಲ್ಲದಾಗಿದೆ.
-ಚನ್ನಕೇಶವ್‌, ಅಧ್ಯಕ್ಷ, ಕಾಮನಬಿಲ್ಲು ಫೌಂಡೇಷನ್‌, ಹುಳಿಯಾರು

Advertisement

ಸಂದಿಗೊಂದಿಗಳಲೆಲ್ಲ ಮರಿಗಳದ್ದೇ ಸದ್ದು, ನಾಯಿಗಳ ಕಿರುಚಾಟ, ಕಚ್ಚಾಟ ನಿವಾಸಿಗಳಿಗೆ ಸಾಕಾಗಿದೆ. ಅಧಿಕಾರಿಗಳಿಗೆ ಇಲ್ಲಿನವರ ಗೋಳು ಅರ್ಥವಾಗಲ್ಲ.
-ಎಲ್‌.ಆರ್‌.ಚಂದ್ರಶೇಖರ್‌, ಪಪಂ ಮಾಜಿ ಸದಸ್ಯ, ಹುಳಿಯಾರು

ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕೊಡಿಸುವುದರಿಂದ ನಿಯಂತ್ರಣಕ್ಕೆ ತರಬಹುದು. ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ನಿರಂತರವಾಗಿ ಪುನರಾವರ್ತನೆ ಮಾಡಬೇಕು. ಪಪಂ ಮತ್ತು ಪಶು ಇಲಾಖೆ ಕಾರ್ಯನಿರ್ವಹಿಸಿದರೆ ನಾಯಿಗಳ ಉಟಪಳದ ಹತೋಟಿಗೆ ತರಬಹುದಾಗಿದೆ.
-ಡಾ.ರಂಗನಾಥ್‌, ಪ್ರಾಣಿ ದಯಾ ಸಂಘ, ಹುಳಿಯಾರು

ಬೀದಿ ನಾಯಿಗಳನ್ನು ಹಿಡಿಸುವುದಕ್ಕೆ ಪ್ರಾಣಿ ದಯಾ ಸಂಘ ವಿರೋಧವಿದೆ. ಹಾಗಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯಿಂದ ಹಾವಳಿ ಕೊನೆಗಾಣಿಸಬಹುದಾಗಿದೆ. ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡುವ ತಂಡ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿದ್ದು, ಮೇಲಧಿಕಾರಿಗಳ ಅನುಮತಿ ಪಡೆದು ಶೀಘ್ರಲ್ಲೇ ಕ್ರಮ ಕೈಗೊಳ್ಳುತ್ತೇನೆ.
-ಮಂಜುನಾಥ್‌, ಪಪಂ ಮುಖ್ಯಾಧಿಕಾರಿ, ಹುಳಿಯಾರು

* ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next