ಸೈದಾಪುರ: ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಹಾಕಿದ ನಿಯಮಗಳನ್ನು ಸಡಿಲಗೊಳಿಸಿದ ಪರಿಣಾಮ ಮಹಾನಗರಗಳತ್ತ ಜನ ಗುಳೆ ಹೋಗುವ ದೃಶ್ಯ ಸಾಮಾನ್ಯವಾಗಿದೆ. ಗುರುಮಠಕಲ್ ಮತಕ್ಷೇತ್ರ ಸೇರಿದಂತೆ ಯಾದಗಿರಿ ತಾಲೂಕಿನ ಬಹುತೇಕ ಗ್ರಾಮಗಳ ಜನರು ಉದ್ಯೋಗವನ್ನರಿಸಿ ಮುಂಬೈ, ಬೆಂಗಳೂರು, ಗೋವಾ ಸೇರಿದಂತೆ ಅನೇಕ ಮಹಾನಗರಗಳಿಗೆ ನಿತ್ಯ ಸುಮಾರು ಐದು ನೂರಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿರುವುದು ಕಂಡು ಬರುತ್ತಿದೆ.
ಸರ್ಕಾರ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಅನೇಕರು ಸ್ವಗ್ರಾಮದತ್ತ ಧಾವಿಸಿದ್ದರು. ಇವರಿಗೆ ಊರಲ್ಲಿ ಸರಿಯಾದ ಕೂಲಿ ಕೆಲಸವಿಲ್ಲದೇ ಮತ್ತೆ ಮಹಾನಗರಗಳತ್ತ ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ಸರ್ಕಾರ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಕೆಲಸ ಮಾಡಲು ಉದ್ಯೋಗ ಖಾತ್ರಿ ಯೋಜನೆಯಡಿ ಅವಕಾಶ ಕಲ್ಪಿಸಿದೆ.
ಆದರೂ ಗುಳೆ ಹೋಗುತ್ತಿರುವುದು ಮಾತ್ರ ತಪ್ಪುತ್ತಿಲ್ಲ. ಪ್ರಸ್ತುತ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಆರಂಭವಾಗದ ಹಿನ್ನೆಲೆ ರೈಲುಗಳ ಮೂಲಕ ಜನರು ತಮ್ಮ ಕುಟುಂಬ ಸಮೇತ ವಿವಿಧ ಮಹಾನಗರಗಳಿಗೆ ತೆರಳುತ್ತಿದ್ದಾರೆ. ಸೈದಾಪುರ ರೈಲು ನಿಲ್ದಾಣದಿಂದ ನಿತ್ಯ ಎರಡು ರೈಲುಗಳು ಸಂಚರಿಸುತ್ತಿದ್ದು, ದಿನನಿತ್ಯ ಮುಂಗಡ ಟಿಕೆಟ್ ಪಡೆಯಲು ಗ್ರಾಮೀಣ ಜನರು ಮುಗಿಬೀಳುತ್ತಿದ್ದಾರೆ.
ಮಳೆಯಾಶ್ರಿತ ನೀರನ್ನೇ ಕೃಷಿಗೆ ಆಧಾರವಾಗಿಸಿಕೊಂಡ ಗುರುಮಠಕಲ್ ಮತಕ್ಷೇತ್ರದ ಜನತೆಗೆ ಕೆರೆ ತುಂಬಿಸುವ ಯೋಜನೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ತ್ವರಿತಗತಿಯಲ್ಲಿ ಆರಂಭಿಸಬೇಕಾದ ಯೋಜನೆ ಕುಂಟುತ್ತಾ ಸಾಗಿದೆ. ಈ ಯೋಜನೆ ಪೂರ್ಣಗೊಂಡರೆ ಸ್ವಲ್ಪ ಪ್ರಮಾಣದಲ್ಲಾದರೂ ಗುಳೆ ಹೋಗುವುದು ತಪ್ಪಲಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.