ರಾಯಚೂರು: ಇಲ್ಲಿನ ನಗರದ ಸಂತೋಷ ನಗರದ ಬಡಾವಣೆಯಲ್ಲಿ ಸಿಎ ಸೈಟ್ ನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶಿವ ಮತ್ತು ಗಣೇಶ ದೇವಸ್ಥಾನವನ್ನು ಅಧಿಕಾರಿಗಳು ಮಂಗಳವಾರ ರಾತೋರಾತ್ರಿ ಬಿಗಿ ಬಂದೋಬಸ್ತ್ ನಲ್ಲಿ ತೆರವುಗೊಳಿಸಿದ್ದಾರೆ.
ನಗರದ ಸರ್ಕಾರಿ ಪ್ರೌಢಶಾಲೆ ನಿರ್ಮಿಸಲು 2022ರ ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಮಂಜೂರು ಸಿಎ ಸೈಟ್ ಮಂಜೂರಾಗಿತ್ತು. ಆದರೆ, ಕೆಲವರು ಅಲ್ಲಿ ನಿರ್ಮಿಸಿದ್ದ ಶೆಡ್ ನಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸ್ಥಳ ಕಬಳಿಸುವ ಹುನ್ನಾರ ನಡೆಸಿದ್ದರು. ಈ ಸ್ಥಳ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಸಂಘಟನೆಗಳು,ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದವು. ಆದರೂ ಯಾರು ಕ್ರಮ ಕೈಗೊಂಡಿರಲಿಲ್ಲ.
ಮಂಗಳವಾರ ರಾತ್ರಿ ಸಹಾಯಕ ಆಯುಕ್ತ ಗಜಾನನ ಬಾಲೆ ನೇತೃತ್ವದಲ್ಲಿ ನೂರಾರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ದೇವಸ್ಥಾನ, ಶೆಡ್ ತೆರವು ಗೊಳಿಸಲಾಗಿದೆ. ನಗರದ ಎಲ್ ಬಿಎಸ್ ನಗರ ಪ್ರೌಢಶಾಲೆಯ ಹೆಸರಿಗೆ ಜಾಗ ಮಂಜೂರಾಗಿದ್ದು, ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಸಹ ಬಿಡುಗಡೆಯಾಗಿತ್ತು. ತೆರವು ಕಾರ್ಯಕ್ಕೆ ಸ್ಥಳೀಯರು ವಿರೋಧಿಸಿದ್ದು, ಪೊಲೀಸ್ ಭದ್ರತೆಯಲ್ಲಿ ದೇಗುಲ ತೆರವು ಕಾರ್ಯ ನಡೆಸಲಾಯಿತು
ನಗರಸಭೆ ಪೌರಾಯುಕ್ತ ಸಿದ್ದಯ್ಯ ಹೀರೆಮಠ, ಹೆಚ್ಚುವರಿ ಎಸ್ ಪಿ ಶಿವಕುಮಾರ್ ಮತ್ತು ಹರೀಶ್, ಮೂವರು ಡಿವೈಎಸ್ ಪಿಗಳು, 10ಕ್ಕೂ ಹೆಚ್ಚು ಪಿಐಗಳು, ನೂರಾರು ಪೊಲೀಸ್ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.