Advertisement

ಕೃಷಿ ಜಾತ್ರೆಯಲ್ಲಿ ಜನಸಾಗರ

01:42 PM Sep 25, 2017 | |

ಧಾರವಾಡ: ಕಣ್ಣು ಹಾಯಿಸಿದಷ್ಟು ದೂರ ಜನವೋ ಜನ.. ಒಂದಷ್ಟು ಜನರಿಗೆ ಹೊಸ ಕೃಷಿ ವಿಧಾನಗಳನ್ನು ನೋಡುವ ತವಕವಾದರೆ, ಇನ್ನು ಕೆಲವರಿಗೆ ಮಳಿಗೆ ಸಾಲಿನಲ್ಲಿ ಕೃಷಿ ಶಾಪಿಂಗ್‌ ಮಾಡುವ ಮಜಾ… ಯುವ ರೈತರಿಗಂತೂ ತಮ್ಮೂರಿನ ಜಾತ್ರೆಯಲ್ಲಿ ಪಟ್ಟಷ್ಟೇ ಸಂಭ್ರಮ… 

Advertisement

ಹೌದು, ಧಾರವಾಡ ಕೃಷಿಮೇಳ-2017ರ 3ನೇ ದಿನವಾದ ರವಿವಾರದಂದು ಕಂಡು ಬಂದ ದೃಶ್ಯಗಳಿವು. ಮೊದಲ ಮತ್ತು 2ನೇ ದಿನ ಜನ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಅದಕ್ಕೆ ಹೊಲಿಸಿದರೆ ರವಿವಾರ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಕೃಷಿ ಮೇಳಕ್ಕೆ ಭೇಟಿ ಕೊಟ್ಟಿದ್ದರು.

ಕೃಷಿ ವಿವಿಯಲ್ಲಿನ ಪ್ರಧಾನ ವೇದಿಕೆಯಲ್ಲಿನ ಚಿಂತನ-ಮಂಥನ ಕಾರ್ಯಕ್ರಮಕ್ಕೂ ರವಿವಾರ ಉತ್ತಮ ಜನಸ್ಪಂದನೆ ಸಿಕ್ಕಿತ್ತು. ಇನ್ನೊಂದೆಡೆ ಕೃಷಿ ಶಾಪಿಂಗ್‌ ಮಳಿಗೆಗಳಲ್ಲಿ ರೈತರು ಕಿಕ್ಕಿರಿದು ತುಂಬಿದ ದೃಶ್ಯ ಕಂಡು ಬಂದಿತು. ಕೃಷಿ ಮೇಳದ ಮೊದಲ ಮತ್ತು ಎರಡನೇ ದಿನ ಧಾರವಾಡ ಜಿಲ್ಲೆಯ ಸ್ಥಳೀಯ ತಾಲೂಕುಗಳಿಂದ ಹೆಚ್ಚು ರೈತರು ಪಾಲ್ಗೊಂಡಿದ್ದರು.

ಆದರೆ ರವಿವಾರ ಮಾತ್ರ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳು ಮಾತ್ರವಲ್ಲ ದಾವಣಗೆರೆ, ರಾಯಚೂರು, ಬಳ್ಳಾರಿ, ಕಲಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ರೈತರು, ಕೃಷಿ ತಂತ್ರಜ್ಞರು, ಜಲತಜ್ಞರು ಮೇಳದಲ್ಲಿ ಭಾಗಿಯಾಗಿದ್ದರು. 

ಕೊಪ್ಪಳದಿಂದ ಜಲಸಂರಕ್ಷಣ ಸಂಸ್ಥೆಯ ಸದಸ್ಯರು ಮೇಳದಲ್ಲಿ ಒಂದೇ ಬಗೆಯ ಬಟ್ಟೆ ಧರಿಸಿ ಓಡಾಡಿದ್ದು ವಿಶೇಷವಾಗಿತ್ತು. ಇನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ, ಸೋಲ್ಲಾಪೂರ ಜಿಲ್ಲೆಯಿಂದಲೂ ರೈತರು ಭಾಗಿಯಾಗಿದ್ದು ಕಂಡು ಬಂತು. ಗೋವಾದಿಂದಲೂ ಕೂಡ ಕೆಲವಷ್ಟು ಜನ ರೈತರು ಧಾರವಾಡ ಕೃಷಿ ಮೇಳಕ್ಕೆ ಭೇಟಿ ಕೊಟ್ಟಿದ್ದರು. 

Advertisement

ಸಂಚಾರ ದಟ್ಟಣೆ: ಕೃಷಿ ವಿವಿ ವ್ಯಾಪ್ತಿಯ 7 ಜಿಲ್ಲೆಗಳಿಂದಲೂ ಕೆಎಸ್‌ಆರ್‌ಟಿಸಿ ಬಸ್‌, ಕ್ರೂಸರ್‌, ಕಾರು ಸೇರಿದಂತೆ ರೈತರು ಸ್ವಂತ ವಾಹನ ಮಾಡಿಕೊಂಡು ಕೃಷಿ ಮೇಳಕ್ಕೆ ಭೇಟಿ ಕೊಟ್ಟಿದ್ದು ಕಂಡು ಬಂದಿತು. ವಿವಿ ಆವರಣದಲ್ಲಿನ ಕ್ರೀಡಾಂಗಣದಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

ಆದರೆ ಕ್ರೀಡಾಂಗಣ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಸಂಪೂರ್ಣ ಭರ್ತಿಯಾಗಿದ್ದರಿಂದ, ಸುತ್ತಮುತ್ತಲಿನ ಖುಲ್ಲಾ ಜಾಗೆಯಲ್ಲಿ ಮತ್ತು ರಸ್ತೆಗಳ ಇಕ್ಕೆಲಗಳಲ್ಲಿ  ಪಾರ್ಕಿಂಗ್‌ ಅನಿವಾರ್ಯವಾಯಿತು. ಮಾತ್ರವಲ್ಲ, ನರೇಂದ್ರ ಕ್ರಾಸ್‌ನ ಬೈಪಾಸ್‌ ಬಳಿ ವೃತ್ತದ ಸುತ್ತಲೂ ನೂರಕ್ಕೂ ಹೆಚ್ಚು ಕಾರ್‌ಗಳನ್ನು ನಿಲ್ಲಿಸಲಾಗಿತ್ತು. ಏಕಮುಖ ಸಂಚಾರ: ಮಧ್ಯಾಹ್ನ 12 ಗಂಟೆ ಹೊತ್ತಿಗೆ ಜನಸಾಗರ ಉತ್ತುಂಗದ ಸ್ಥಿತಿ ತಲುಪಿತು.

ಹೀಗಾಗಿ ಧಾರವಾಡ-ಬೆಳಗಾವಿ ರಸ್ತೆ ಸಂಚಾರವನ್ನು ಏಕಮುಖ ಮಾಡಲಾಯಿತು. ಧಾರವಾಡ ಕಡೆಯಿಂದ ಮಾತ್ರ ವಾಹನಗಳು ಕೃಷಿ ವಿವಿಗೆ ಬರುವಂತೆ ವ್ಯವಸ್ಥೆ ಮಾಡಲಾಯಿತು. ಹೊರಗೆ ಹೋಗಲು ನರೇಂದ್ರ ಕ್ರಾಸ್‌ ಮೂಲಕ ಹೋಗಿ ಬೈಪಾಸ್‌ನಿಂದ ಕೆಲಗೇರಿ ರಸ್ತೆ ಕೂಡಿಕೊಂಡು ಧಾರವಾಡಕ್ಕೆ ಬರುವ ವ್ಯವಸ್ಥೆ ರೂಪಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next