Advertisement

ಮನುಷ್ಯನ ಬೆಳವಣಿಗೆಗೆ ಜನಪದವೇ ಜೀವಾಳ: ಸಿಎಂ

06:35 PM Mar 25, 2023 | Team Udayavani |

ಶಿಗ್ಗಾವಿ: ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ವಿಷಯಗಳ ಸಂಗ್ರಹ ಆಗಬೇಕೆಂಬ ಉದ್ದೇಶದಿಂದ ಜಾನಪದ ವಿವಿ ಮಾಡಲಾಗಿದ್ದು, ಬರುವ ದಿನಗಳಲ್ಲಿ ಯಾವುದೇ ದೇಶದ ಜಾನಪದ ವಿಷಯ ಇಲ್ಲಿ ಸಿಗುವಂತಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವ ವಿದ್ಯಾಲಯದಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯದ ಶಂಕುಸ್ಥಾಪನೆ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ಕಲಾಭವನ ಉದ್ಘಾಟನೆ, ಶೈಕ್ಷಣಿಕ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮನುಷ್ಯನ ಬೆಳವಣಿಗೆ ಸಂಪೂರ್ಣವಾಗಿ ವ್ಯಕ್ತವಾಗಿದ್ದರೆ ಅದು ಜನಪದದಿಂದ ಮಾತ್ರ. ಆಡುಭಾಷೆಯಲ್ಲಿ ಇರುವ ಹಾಡು, ಸಂಗೀತ ಅವತ್ತಿನ ಕಾಲದ ಬದುಕಿನ ಕಥೆ ಹೇಳುತ್ತವೆ. ರೈತಾಪಿ ವರ್ಗ, ನೇಕಾರರು, ದುಡಿಯುವ ವರ್ಗದ ವಿಷಯಗಳನ್ನು ಸಂಗ್ರಹ ಮಾಡಲಾಗಿದೆ. ನಾಗರಿಕತೆಯ ಬದಲಾವಣೆ, ಜಾನಪದ ಹೇಗೆ ಅದಕ್ಕೆ ಹೊಂದಿಕೊಂಡಿತ್ತು ಎಂಬುದು ಸಂಗ್ರಹವಾಗಿದೆ. ಇಡೀ ಉತ್ತರ ಕರ್ನಾಟದ ಕಲಾವಿದರಿಗೆ ಇಲ್ಲಿ ಅವಕಾಶ ಸಿಗಬೇಕೆಂದು ಹೇಳಿದರು.

ಜಾನಪದ ಪ್ರವಾಸಿ ತಾಣ ಇದಾಗಬೇಕು. ಕಲೆ ಜೀವಂತವಾಗಿರಬೇಕೆಂದು ಇಷ್ಟು ದೊಡ್ಡ ಕಲಾಮಂದಿರ ನಿರ್ಮಾಣ ಮಾಡಿದ್ದೇವೆ. ಇನ್ನೊಂದು ಹದಿನೈದು ದಿನಗಳಲ್ಲಿ ಕಲಾ ಮಂದಿರಕ್ಕೆ ಫರ್ನಿಚರ್‌ ಮಾಡಲಾಗುತ್ತದೆ. ಕೇಂದ್ರದ 1 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 1 ಕೋಟಿ ರೂ. ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣವಾಗುತ್ತಿದ್ದು, ವಿಭಿನ್ನವಾಗಿ ಸಿದ್ಧಪಡಿಸಲು ಹೇಳಿದ್ದೇನೆ. ಇದು ಜಾನಪದ ಪ್ರವಾಸಿ ತಾಣ ಆಗಬೇಕು. ಜಾನಪದ ವಿವಿ ಅಡಿಗಲ್ಲು ನಾವೇ ಹಾಕಿದ್ದು. ಇಂದು ಬಹಳ ಸಂತೋಷದಿಂದ ಕಲಾಭವನ ಉದ್ಘಾಟನೆ ಮಾಡಿದ್ದೇವೆ ಎಂದರು.

ನಮ್ಮ ಸಂಸ್ಕೃತಿ ಶ್ರೀಮಂತಗೊಳಿಸುವ ವಿವಿ ಇದಾಗಿದೆ. ಜನರ ಮಧ್ಯೆ ಇದ್ದು ಎಲ್ಲವನ್ನೂ ತಿಳಿದುಕೊಂಡು ಕಾರ್ಯ ನಿರ್ವಹಿಸುವ ಕುಲಪತಿ ಇಲ್ಲಿದ್ದಾರೆ. ಈ ವಿವಿ ನೌಕರಿ ಸೃಷ್ಟಿ ಮಾಡೋ ವಿವಿ ಅಲ್ಲ. ನಮ್ಮ ಸಂಸ್ಕೃತಿ ಶ್ರೀಮಂತಗೊಳಿಸುವ ವಿವಿ. ಜಾನಪದ ವಿವಿಯಲ್ಲಿ ಓದಿದ ಮಕ್ಕಳಿಗೆ ವಿಶೇಷ ಕೆಲಸ ಮಾಡಲು ಆರ್ಥಿಕ ನೆರವು ನೀಡುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಎರಡನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಏನು ಬೇಕು ಅದಕ್ಕೆ ಮಂಜುರಾತಿ ನೀಡುವೆ. ಜಾನಪದ ವಿವಿಗೆ ಕ್ಯಾಪಸ್‌ ಇಲ್ಲ. ಕ್ಯಾಂಪಸ್‌ ರಹಿತ ವಿವಿ ಇದು. ಜನ ಸಮುದಾಯ ಇರೋ ಕಡೆನೇ ಈ ವಿವಿ ಇದೆ.

Advertisement

ಜಾನಪದ ವಿವಿ ಭಾರತಕ್ಕೆ ಪ್ರಸಿದ್ಧವಾಗಲಿ. ಪ್ರೊಫೆಸರ್‌ ಗಳು ಜನರ ನಡುವೆ ಹೋಗಲಿ. ನಾಗರೀಕತೆ ಬೇರೆ, ಸಂಸ್ಕೃತಿ ಬೇರೆ. ಮನೆಯಲ್ಲಿ ಮೊದಲು ಒನಕೆ, ಬೀಸುಕಲ್ಲು ಇದ್ದವು. ಈಗ ಮಿಕ್ಸಿ ಬಂತು. ಬೀಸುಕಲ್ಲು ಇಲ್ಲ, ಹಾಡೂ ಇಲ್ಲ. ಈಗೆಲ್ಲಾ ಮಿಕ್ಸಿ ಬಂದಿವೆ. ಟರ್‌ ಟರ್‌ ಅನ್ನುತ್ತವೆ. ಇದರಲ್ಲಿ ಯಾವ ಸಂಗೀತವೂ ಇಲ್ಲ. ನಮ್ಮತ್ರ ಏನಿದೆ ಅದು ನಾಗರಿಕತೆ. ನಾವೇನಾಗಿದ್ದೇವೆ ಅದು ಸಂಸ್ಕೃತಿ. ಜಾನಪದ ವಿವಿ ಸಂಸ್ಕೃತಿ ಉಳಿಸುವ ಕೆಲಸ ಮಾಡಲಿ. ಭಾರತಕ್ಕೆ ಪ್ರಸಿದ್ಧವಾಗಲಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಜಾನಪದ ವಿವಿ ಸಂಸ್ಕೃತಿ ಉಳಿಸುವ ಕೆಲಸ ಮಾಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಹತ್ತಿರ ಏನಿದೆ ಅದು ನಾಗರಿಕತೆ. ನಾವು ಏನಾಗಿದ್ದೇವೆ ಅದು ಸಂಸ್ಕೃತಿ. ಅಂತಹ ಸಂಸ್ಕೃತಿಯನ್ನು ಉಳಿಸುವ ಕೆಲಸ ಜಾನಪದ ವಿಶ್ವವಿದ್ಯಾಲಯದಿಂದ ಆಗಲಿ. ಈ ವಿಶ್ವವಿದ್ಯಾಲಯ ಭಾರತಕ್ಕೆ ಪ್ರಸಿದ್ದಿ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಾನಪದ ವಿವಿ ಕುಲಪತಿ ಪ್ರೊ|ಟಿ.ಎಂ. ಭಾಸ್ಕರ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ|ಸಿ.ಟಿ.ಗುರುಪ್ರಸಾದ್‌, ಮೌಲ್ಯಮಾಪನ ಕುಲಸಚಿವ ಪ್ರೊ| ಎನ್‌.ಎಂ. ಸಾಲಿ, ಡಾ| ಬಸವರಾಜ ಕೇಲಗಾರ್‌, ಡಿ.ಎಸ್‌. ಮಾಳಗಿ, ಶಿವಾನಂದ ಮ್ಯಾಗೇರಿ, ಶ್ರೀಕಾಂತ್‌ ದುಂಡಿಗೌಡ್ರ, ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಇದ್ದರು. ಸಹಾಯಕ ಕುಲಸಚಿವ ಶಹಜಹಾನ್‌ ಮುದಕವಿ ನಿರೂಪಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next