ಆಳಂದ: ಎಂದಿನಂತೆ ಮಾರ್ಚ್ ಮುಗಿದು ಏಪ್ರಿಲ್ ಅರ್ಧ ಅವಧಿ ಮುಗಿಯುತ್ತಾ ಬಂದಿದೆ. ಪ್ರತಿವರ್ಷದಂತೆ ಈ ವರ್ಷವೂ ಬೇಸಿಗೆ ತಾಪ ಹೆಚ್ಚುತ್ತಲೇ ಇದ್ದು, ಗಡಿನಾಡಿನ ಜನರು ಬಸವಳಿದು ಹೋಗಿದ್ದರೇ, ಜಾನುವಾರುಗಳು ನೀರಿಗಾಗಿ ತತ್ವಾರ ಪಡುತ್ತಿವೆ.
ಮಕ್ಕಳು, ಯುವಕರು ಗಡಿನಾಡಿನಲ್ಲಿರುವ ಕೆರೆ, ಬಾವಿಗಳಲ್ಲಿ ಈಜಿ ಧಗೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ವೃದ್ಧರು, ಶೆಡ್ ಮನೆಗಳನ್ನು ಹೊಂದಿದವರು ನೆರೆಯ ದೇವಸ್ಥಾನ, ಗಿಡ-ಮರಗಳ ನೆರಳನ್ನು ಆಶ್ರಯಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಯಾಗಿದ್ದರಿಂದ ಬಿಸಿಲಿನ ಪ್ರಖರತೆ ಕಡಿಮೆಯಾಗಬಹುದು ಎಂದು ಕೊಂಡಿದ್ದರೂ ಪ್ರತಿ ವರ್ಷ ಇರುವಷ್ಟೇ ಅಂದರೆ 40ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಬಿಸಿಲಿದೆ. ಇದು ಜನ, ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಎರಡು ದಿನಗಳ ಹಿಂದೆ ತಾಲೂಕಿನ ಮಾದನ ಹಿಪ್ಪರಗಾ, ಖಜೂರಿಯಲ್ಲಿ ಕೊಂಚ ಅಕಾಲಿಕ ಮಳೆ ಸುರಿದು ತಂಪೇರಿದರೆ ಆಳಂದ ಮತ್ತು ನರೋಣಾ ವಲಯದ ವಾತಾವರಣ ಅಷ್ಟೇನು ತಂಪಾಗಿಲ್ಲ. ವಾರದಿಂದ ರಾತ್ರಿ ವೇಳೆ ಮೋಡಮುಸುಕಿದ ವಾತಾವರಣ ಹಾಗೂ ಕೆಲವೆಡೆ ಸುರಿದ ಕೊಂಚ ಜಿಟಿ, ಜಿಟಿ ಮಳೆಯಿಂದಾಗಿ ತಂಪೇರಿತ್ತಾದರೂ ಮರುದಿನದ ಎಂದಿನಂತೆ ಬಿಸಿಲಿನ ಪ್ರಕರತೆ ಹೆಚ್ಚುತ್ತಲೇ ಇದೆ. ಏಪ್ರಿಲ್ ತಿಂಗಳಲ್ಲೇ ತಾಲೂಕಿನಾದ್ಯಂತ ಹೆಚ್ಚಿನ ಜಾತ್ರೆ, ಉತ್ಸವಗಳು ಇವೆ. ಇವುಗಳಲ್ಲಿ ಪಾಲ್ಗೊಂಡ ಜನ ಹೈರಾಣಾಗುತ್ತಿದ್ದಾರೆ. ವಿವಾಹ, ನೆಂಟಸ್ಥನ, ಗೃಹ ಶಾಂತಿ, ಜಾತ್ರೆ, ಉತ್ಸವ ಹೀಗೆ ಬಿಸಿಲಿನ ಪ್ರಖರತೆಗೆ ಮೈಯೊಡ್ಡಿ ಜನತೆ ದಿನದೂಡುತ್ತಿದ್ದಾರೆ.
ತಂಪು ಪಾನೀಯದ ಮೊರೆ
ಒಂದೂವರೆ ತಿಂಗಳಿಂದ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಿಗಳು ಜನರ ದಾಹ ತಣಿಸಲು ತಂಪು ಪಾನೀಯ ಅಂಗಡಿಗಳನ್ನು ತೆರೆದಿದ್ದು, ವ್ಯಾಪಾರ ಭರ್ಜರಿಯಿಂದ ನಡೆಯುತ್ತಿದೆ. ಕಲ್ಲಂಗಡಿ, ಕರಬೂಜ್, ಸೇಬು, ಅಂಜೂರು ಮತ್ತಿತರ ಹಣ್ಣಿನ ಪಾನೀಯ, ಕಬ್ಬಿನಹಾಲಿಗೆ ಬೇಡಿಕೆ ಹೆಚ್ಚುತ್ತಿದೆ. ಅಲ್ಲದೇ ಮಲೆನಾಡಿನಿಂದ ತರಿಸಿದ ಎಳೆನೀರು ಹೆಚ್ಚು ಮಾರಾಟವಾಗುತ್ತಿದೆ. ಮಳೆ ಉತ್ತಮವಾಗಿ ಆಗಿದ್ದರಿಂದ ತೋಟಗಳಲ್ಲಿ ತರಕಾರಿ ಬೆಳೆ ಉತ್ತಮವಾಗಿದೆ. ಜತೆಗೆ ಬೆಲೆಯೂ ಏರಿಕೆಯಾಗಿದೆ. ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿದೆ. ಬಡವರು ಮತ್ತು ಮಧ್ಯವರ್ಗದ ಜನರು ಮಣ್ಣಿನ ಮಡಿಕೆಯಲ್ಲೇ ನೀರು ತಂಪಾಗಿಸಿ ಕುಡಿದರೆ, ಅನುಕೂಲಸ್ತರು ಪ್ರಿಜ್‌ನಲ್ಲಿನ ನೀರು ಕುಡಿಯುತ್ತಿದ್ದಾರೆ.
ಅಧಿಕಾರಿಗಳು ಆರಾಮ, ಜನ ಹೈರಾಣ
ಹಬ್ಬಗಳಿಗೆ ಸರ್ಕಾರಿ ರಜೆ, ಎಡನೇ ಶನಿವಾರ ಹೀಗೆ ವಾರದ ರಜೆಗಳೇ ಹೆಚ್ಚಿರುವುದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮರ್ಪಕವಾಗಿ ಲಭ್ಯವಾಗದೇ ಸಾಮಾನ್ಯ ಜನರು ಕಚೇರಿಗಳಿಗೆ ಅಲೆದಾಡಿ ಹೈರಾಣವಾಗುತ್ತಿದ್ದಾರೆ. ಇನ್ನೊಂದೆಡೆ ಬಹುತೇಕ ಇಲಾಖೆಗಳು ಮಿನಿವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರ ಆಗಿದ್ದರಿಂದ ದೂರದ ಕಚೇರಿಗೆ ಹೋಗಿ ಬರಲು ಗ್ರಾಮಸ್ಥರು ಪರದಾಡುವಂತೆ ಆಗಿದೆ. ಇದೇ ಪರಿಸ್ಥಿತಿ ಅಂಚೆ ಇಲಾಖೆಯಲ್ಲೂ ಇದೆ.
-ಮಹಾದೇವ ವಡಗಾಂವ