Advertisement

ಮತ್ತೆ ಯುದ್ಧ ಭೀತಿ; ಅಮೆರಿಕ-ಚೀನ ನಡುವೆ ತೀವ್ರಗೊಂಡ ಸಂಘರ್ಷ

08:33 PM Aug 02, 2022 | Team Udayavani |

ಬೀಜಿಂಗ್‌: ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರ ತೈವಾನ್‌ ಭೇಟಿಯು ಅಮೆರಿಕ ಮತ್ತು ಚೀನಾದ ನಡುವೆ ಯುದ್ಧದ ಕಾರ್ಮೋಡ ಹಬ್ಬುವಂತೆ ಮಾಡಿದೆ.

Advertisement

ತೈವಾನ್‌ ಮತ್ತು ಚೀನ ನಡುವಿನ ವಿರಸವೂ ತಾರಕಕ್ಕೇರಿದ್ದು, ನ್ಯಾನ್ಸಿ ತೈವಾನ್‌ಗೆ ಭೇಟಿ ಚೀನವನ್ನು ಕೆರಳಿಸಿದೆ. ನ್ಯಾನ್ಸಿ ಅವರೇನಾದರೂ ತೈವಾನ್‌ಗೆ ಕಾಲಿಟ್ಟಿದ್ದೇ ಆದರೆ, ಅದಕ್ಕೆ ಸೂಕ್ತ ಬೆಲೆಯನ್ನು ಅಮೆರಿಕ ತೆರಬೇಕಾಗುತ್ತದೆ. ಅಷ್ಟೇ ಅಲ್ಲ, ಮುಂದಾಗುವ ಘೋರ ಪರಿಣಾಮಗಳಿಗೆ ಅಮೆರಿಕವೇ ಹೊಣೆ ಹೊರಬೇಕಾಗುತ್ತದೆ ಎಂದು ಚೀನದ ವಿದೇಶಾಂಗ ಇಲಾಖೆಯ ವಕ್ತಾರ ಹುವಾ ಚುನ್ಯಿಂಗ್‌ ಕಿಡಿಕಾರಿದ್ದಾರೆ.

ಇದಾದ ಬೆನ್ನಲ್ಲೇ ಮೂರೂ ದೇಶಗಳು ಕೈಗೊಂಡ ಕ್ರಮಗಳೆಲ್ಲವೂ “ಯುದ್ಧ ಭೀತಿ’ಯನ್ನು ಮೂಡಿಸಿವೆ. ತೈವಾನ್‌ನನ್ನು ಅತಿಕ್ರಮಿಸಿಕೊಂಡಿರುವ ಚೀನ, ಇಡೀ ತೈವಾನ್‌ ತನ್ನ ದೇಶದ್ದೇ ಭಾಗ ಎಂಬ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಆದರೆ, ನೆಪಮಾತ್ರಕ್ಕೊಂದು ಸ್ವಾಯತ್ತ ಸರ್ಕಾರವನ್ನು ಅಲ್ಲಿ ಚೀನ ನೇಮಿಸಿದೆ. ಅಮೆರಿಕದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ತೈವಾನ್‌ಗೆ ಭೇಟಿ ನೀಡುತ್ತಿರುವುದು 25 ವರ್ಷಗಳಲ್ಲಿ ಇದೇ ಮೊದಲು.

ನ್ಯಾನ್ಸಿ ಅವರನ್ನು ಹೊತ್ತ ಅಮೆರಿಕ ವಾಯುಪಡೆ ವಿಮಾನವು ಮಲೇಷ್ಯಾಗೆ ಸಂಚರಿಸಿ, ಅಲ್ಲಿಂದ ಫಿಲಿಪ್ಪೀನ್ಸ್‌ ಕಡೆಗೆ ಬಂದು, ನಂತರ ತೈವಾನ್‌ ಪ್ರವೇಶಿಸಿದೆ. ಈ ವಿಮಾನವು ಫ್ಲೈಟ್‌ರೇಡಾರ್‌24 ವೆಬ್‌ಸೈಟ್‌ನಲ್ಲಿ ಅತ್ಯಂತ ಹೆಚ್ಚು ಟ್ರ್ಯಾಕ್‌ ಆದ ವಿಮಾನ ಎಂಬ ದಾಖಲೆಯನ್ನೂ ಮಂಗಳವಾರ ಸೃಷ್ಟಿಯಾಗಿದೆ. ನ್ಯಾನ್ಸಿ ಅವರಿಗೆ ಅಮೆರಿಕದ ಜೊತೆಗೆ ತೈವಾನ್‌ ಯುದ್ಧ ವಿಮಾನಗಳೂ ಬೆಂಗಾವಲಾಗಿ ಸಂಚರಿಸಿವೆ.

ಷೇರುಪೇಟೆ ಪತನ:
ನ್ಯಾನ್ಸಿ ತೈವಾನ್‌ ಭೇಟಿಯು ಅಮೆರಿಕ ಮತ್ತು ಚೀನ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಲಿದೆ ಎಂಬ ಭೀತಿಯು ಷೇರುಪೇಟೆ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಮಂಗಳವಾರ ಅಮೆರಿಕ ಷೇರುಪೇಟೆ ಭಾರೀ ಕುಸಿತ ಕಂಡಿದೆ.

Advertisement

ಸೈಬರ್‌ ದಾಳಿ:
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮಂಗಳವಾರ ತೈವಾನ್‌ನ ಅಧ್ಯಕ್ಷೀಯ ಕಾರ್ಯಾಲಯದ ವೆಬ್‌ಸೈಟ್‌ ಮೇಲೆ ಸೈಬರ್‌ ಅಟ್ಯಾಕ್‌ ಆಗಿದೆ. ಸ್ವಲ್ಪಹೊತ್ತು ವೆಬ್‌ಸೈಟ್‌ ಕೆಲಸ ಮಾಡಲಿಲ್ಲ. ನಂತರ ಅದನ್ನು ಸರಿಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧ ವಿಮಾನಗಳ ಸದ್ದು
ಚೀನದ ಎಚ್ಚರಿಕೆಯ ನಡುವೆಯೇ ನ್ಯಾನ್ಸಿಯವರು ತೈವಾನ್‌ನತ್ತ ಮಂಗಳವಾರ ಪ್ರಯಾಣ ಬೆಳೆಸಿದ್ದಾರೆ. ಅವರು ತೈವಾನ್‌ಗೆ ಆಗಮಿಸುವ ಮುನ್ನವೇ ಅಮೆರಿಕದ ನಾಲ್ಕು ಯುದ್ಧ ನೌಕೆಗಳು ತೈವಾನ್‌-ಚೀನ ಕಡಲಿನಲ್ಲಿ ಬೀಡುಬಿಟ್ಟಿವೆ. ಇದರಲ್ಲೊಂದು ಯುದ್ಧ ವಿಮಾನಗಳನ್ನು ಹೊತ್ತೂಯ್ಯಬಲ್ಲ ಹಡಗಾಗಿದೆ. ಇನ್ನೊಂದೆಡೆ, ಚೀನದ ಹಲವು ಯುದ್ಧವಿಮಾನಗಳು ತೈವಾನ್‌ ಜಲಸಂಧಿಯನ್ನು ವಿಭಜಿಸುವ ರೇಖೆಯ ಸಮೀಪದಲ್ಲೇ ಹಾರಾಟ ಆರಂಭಿಸಿವೆ. ಈವರೆಗೆ ತೈವಾನ್‌ ಆಗಲೀ, ಚೀನದ ವಿಮಾನವಾಗಲೀ ಈ ರೇಖೆಯನ್ನು ದಾಟಿರಲಿಲ್ಲ. ಚೀನಾದ ಸಮರನೌಕೆಗಳೂ ಜಲಸಂಧಿಯ ಪಕ್ಕದಲ್ಲೇ ಗಸ್ತು ತಿರುಗತೊಡಗಿವೆ. ಇದರ ಬೆನ್ನಲ್ಲೇ ಅಮೆರಿಕ ವಾಯುಪಡೆಯ 13 ವಿಮಾನಗಳು ಜಪಾನ್‌ನ ಸೇನಾನೆಲೆಯಿಂದ ಹೊರಟಿದ್ದು, ಇವುಗಳೇ ನ್ಯಾನ್ಸಿ ಅವರಿಗೆ ಎಸ್ಕಾರ್ಟ್‌ ನೀಡಲಿವೆ ಎಂದು ಹೇಳಲಾಗಿದೆ. ಅತ್ತ ತೈವಾನ್‌ ಕೂಡ ತನ್ನ ಸಶಸ್ತ್ರಪಡೆಗಳಿಗೆ ಯುದ್ಧ ಸನ್ನದ್ಧ ಸ್ಥಿತಿಗೆ ಬರುವಂತೆ ಸೂಚಿಸಿದೆ.

ತೈವಾನ್‌ ಆಹಾರ ವಸ್ತುಗಳಿಗೆ ನಿಷೇಧ
ತನ್ನ ಪ್ರಬಲ ವಿರೋಧದ ನಡುವೆಯೂ ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿಯವರನ್ನು ತನ್ನ ನೆಲಕ್ಕೆ ಆಹ್ವಾನಿಸಲು ಸಜ್ಜಾಗಿರುವ ತೈವಾನ್‌ಗೆ ಸೆಡ್ಡು ಹೊಡೆದಿರುವ ಚೀನ, ತೈವಾನ್‌ನಿಂದ ತನ್ನಲ್ಲಿ ಆಮದಾಗುತ್ತಿದ್ದ ಬಿಸ್ಕೇಟ್‌ಗಳು ಹಾಗೂ ಪೇಸ್ಟ್ರಿಗಳ ಮೇಲೆ ನಿಷೇಧ ಹೇರಿದೆ. ತೈವಾನ್‌ 3,200 ಕಂಪನಿಗಳು ಚೀನಾದೊಂದಿಗೆ ಆಹಾರ ಸಾಮಗ್ರಿಗಳನ್ನು ರಫ್ತು ಮಾಡುತ್ತಿವೆ. ತೈವಾನ್‌ ಮೇಲೆ ಮುನಿದಿರುವ ಚೀನ, 2,066 ಕಂಪನಿಗಳನ್ನು ಈಗ ಕಪ್ಪು ಪಟ್ಟಿಗೆ ಸೇರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next