Advertisement

ಪೆಲಿಕಾನ್‌ ಹಕ್ಕಿಗಳಿಗೆ ವಿಚಿತ್ರ ಸೋಂಕು, ಆತಂಕ

06:55 AM Dec 07, 2017 | Team Udayavani |

ಮಂಡ್ಯ: ಮದ್ದೂರು ತಾಲೂಕಿನ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ವಿಚಿತ್ರ ಸೋಂಕಿಗೆ ಒಳಗಾಗಿ
ಪೆಲಿಕಾನ್‌ ಹಕ್ಕಿಯೊಂದು ಮಂಗಳವಾರ ಮೃತಪಟ್ಟ ಬೆನ್ನ ಹಿಂದೆಯೇ ಮತ್ತಷ್ಟು ಹಕ್ಕಿಗಳು ಅಸ್ವಸ್ಥಗೊಂಡಿರುವುದು
ಆತಂಕ ಮೂಡಿಸಿದೆ.

Advertisement

ಸೋಂಕಿಗೆ ಬಲಿಯಾದ ಹಕ್ಕಿಯ ಶವವನ್ನು ಬುಧವಾರ ಶವಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೇ ಹಕ್ಕಿ ಸಾವನ್ನಪ್ಪಲು ಹಾಗೂ ಹಲವು ಹಕ್ಕಿಗಳು ಅಸ್ವಸ್ಥಗೊಳ್ಳಲು ಕಾರಣವೇ  ನೆಂಬುದು ಬೆಳಕಿಗೆ ಬರಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಹನುಮೇಗೌಡ “ಉದಯವಾಣಿ’ಗೆ ತಿಳಿಸಿದರು.

ಪೆಲಿಕಾನ್‌ ಹಕ್ಕಿಯ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ. ಆ ಜ್ವರದ ಯಾವ ಲಕ್ಷಣಗಳೂ ಇಲ್ಲಿ ಕಂಡುಬಂದಿಲ್ಲ. ಕಲುಷಿತ ಆಹಾರ ಸೇವನೆ ಹಕ್ಕಿ ಸಾವಿಗೆ ಕಾರಣವಿರಬಹುದು.ಶವಪರೀಕ್ಷೆ ವರದಿ ಬಂದ ನಂತರವಷ್ಟೇ ನಿಜಾಂಶ ಗೊತ್ತಾಗಲಿದೆ ಎಂದು ಹೇಳಿದರು.

ಗ್ರಾಮಸ್ಥರ ಆತಂಕ: ವಿದೇಶಿ ಹಕ್ಕಿಗಳು ಅಸ್ವಸ್ಥಗೊಳ್ಳುತ್ತಿರುವ ವಿಷಯ ತಿಳಿದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಕೊಕ್ಕರೆ ಬೆಳ್ಳೂರಿಗೆ ತೆರಳಿ ಪರಿಶೀಲನೆ ನಡೆಸಿದರು. ಪೆಲಿಕಾನ್‌ ಹಕ್ಕಿಯ ಸಾವಿನಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಬುಧವಾರ ಉಳಿದ ಹಕ್ಕಿಗಳು ಆಹಾರ ಸೇವಿಸದಿರುವುದು ಮತ್ತು ಮಂಕಾಗಿ ಕುಳಿತಿರುವುದು ಅವರನ್ನು ಇನ್ನಷ್ಟು ಚಿಂತೆಗೀಡುಮಾಡಿದೆ.

ಕುಕ್ಕರಹಳ್ಳಿ ಕೆರೆಯಲ್ಲೂ ಪೆಲಿಕಾನ್‌ಗೆ ಚಿಕಿತ್ಸೆ
ಮೈಸೂರು
: ಕುಕ್ಕರಹಳ್ಳಿ ಕೆರೆಯಲ್ಲಿ ಕಂಡುಬಂದ ಅನಾರೋಗ್ಯಪೀಡಿತ ಪೆಲಿಕಾನ್ ಪಕ್ಷಿಗೆ ಚಿಕಿತ್ಸೆ ನೀಡಲಾಯಿತು.
ಕೆರೆಯ ಆಳ ನೀರಿರುವ ಕಡೆಯಲ್ಲಿ ರೋಗಪೀಡಿತ ಪೆಲಿಕಾನ್‌ ಪಕ್ಷಿ ಕಂಡುಬಂದ ಹಿನ್ನೆಲೆಯಲ್ಲಿ ಪಶುಪಾಲನಾ ಇಲಾಖೆ ವೈದ್ಯರ ತಂಡ ಬೋಟ್‌ ಮೂಲಕ ಪಕ್ಷಿಯನ್ನು ರಕ್ಷಿಸಿ ಹೊರತಂದು ಚಿಕಿತ್ಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next