ಢಾಕಾ: “ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ನಡೆಯಬೇಕೆಂದರೆ 5 ಲಕ್ಷ ಟಾಕಾ (3.50 ಲಕ್ಷ ರೂ.) ನಮಗೆ ಕೊಡಿ. ಇಲ್ಲದಿದ್ದರೆ ಪೂಜೆಯೂ ನಡೆಯಲ್ಲ, ನಿಮ್ಮನ್ನು ಜೀವಂತವೂ ಉಳಿಸಲ್ಲ.’ ಹೀಗೆಂದು ಬಾಂಗ್ಲಾದ ದೇವಸ್ಥಾನಗಳಿಗೆ ಅನಾಮಧೇಯ ಬೆದರಿಕೆ ಪತ್ರಗಳು ಬರುತ್ತಿವೆ.
ದುರ್ಗಾಪೂಜೆ ಸಮೀಪಿಸುತ್ತಿರುವಂತೆಯೇ ದುಷ್ಕರ್ಮಿಗಳು ಕಳುಹಿಸುತ್ತಿರುವ ಈ ಪತ್ರಗಳು ಹಿಂದೂಗಳಲ್ಲಿ ಆತಂಕ ಹುಟ್ಟಿಸಿದೆ.
ಬಾಂಗ್ಲಾ ದಂಗೆ ಬಳಿಕ ಆ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಆತಂಕದಲ್ಲೇ ಬದುಕುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅದನ್ನು ತಹಬದಿಗೆ ತರಲು ಪೊಲೀಸರು, ಆಡಳಿತ ಹೆಣಗಾಡುವಷ್ಟರಲ್ಲೇ ಇದೀಗ ದುರ್ಗಾ ಪೂಜೆಗೆ ಕಂಟಕ ಎದುರಾಗಿದೆ. ಹಿಂದೂಗಳು, ದೇಗುಲಗಳು ಮತ್ತು ಪೂಜಾ ಸಮಿತಿಯ ಸಿಬ್ಬಂದಿಗೆ ಈ ಬೆದರಿಕೆ ಪತ್ರಗಳು ಬಂದಿವೆ. ಅದರಲ್ಲಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ತುಂಡುತುಂಡಾಗಿ ಕತ್ತರಿಸುತ್ತೇವೆ. ನಾವು ಹೇಳಿದ ಜಾಗಕ್ಕೆ 3.50 ಲಕ್ಷ ರೂ.ಗಳನ್ನು ತಂದುಕೊಡಬೇಕು ಇಲ್ಲದಿದ್ದರೆ, ನಿಮ್ಮ ಕುಟುಂಬಕ್ಕೂ ತೊಂದರೆ ತಪ್ಪಿದ್ದಲ್ಲ ಎಂದೂ ದುಷ್ಕರ್ಮಿಗಳು ಬೆದರಿಸಿದ್ದಾರೆ.
ಘಟನೆ ಬೆನ್ನಲ್ಲೇ ಹಲವು ದುರ್ಗಾ ಪೂಜಾ ಸಮಿತಿಗಳು ಸಭೆ ನಡೆಸಿ ಈ ವರ್ಷ ಹಬ್ಬದ ಆಚರಣೆ ಕೈಬಿಡಲು ನಿರ್ಧರಿಸಿರುವುದಾಗಿ ಹೇಳಿವೆ. ಇತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಸಲು ಬಾಂಗ್ಲಾ ಪೊಲೀಸರು ಕೂಡ ಅಲರ್ಟ್ ಆಗಿರುವುದಾಗಿ ತಿಳಿಸಿದ್ದಾರೆ. ಅ.9ರಿಂದ ಅ.13ರವರೆಗೆ ದುರ್ಗಾಪೂಜೆ ನಡೆಯಬೇಕಿದೆ.