ಲಕ್ನೋ: “500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಮೊಘಲ್ ದೊರೆ ಬಾಬರ್‌ನ ಸೇನೆ ಯಾವ ಕೃತ್ಯ ಎಸಗಿತೋ, ಸಂಭಲ್ ಹಾಗೂ ನೆರೆಯ ಬಾಂಗ್ಲಾದೇಶದಲ್ಲಿ ಈಗ ನಡೆಯುತ್ತಿರುವ ಕೃತ್ಯಗಳೂ ಅಂಥವೇ ಆಗಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಾಯಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಬಾಬರ್ ಅವಧಿಯಲ್ಲಿ ಹಿಂದೂಗಳ ಪ್ರಾರ್ಥನಾ ಮಂದಿರ, ಸಮುದಾಯದವರ ಮೇಲೆ ದಾಳಿ ನಡೆಸಲಾಗಿತ್ತು. ಸಂಭಲ್, ಬಾಂಗ್ಲಾದೇಶದಲ್ಲಿ ಅದೇ ಮಾದರಿಯ ದಾಳಿಗಳು ನಡೆದಿವೆ. ಅಂಥ ಕೃತ್ಯಗಳ ಡಿಎನ್‌ಎ ಒಂದೇ ಆಗಿದೆ ಎಂದರು.
ಒಗ್ಗಟ್ಟಿಗೆ ಪ್ರಾಮುಖ್ಯ ನೀಡಿದ್ದರೆ ಬೆರಳಣಿಕೆಯಷ್ಟು ಆಕ್ರಮಣಕಾರರು ನಮ್ಮನ್ನು ಮಣಿಸಲಾಗುತ್ತಲಿರಲಿಲ್ಲ. ನಮ್ಮ ತೀರ್ಥಕ್ಷೇತ್ರಗಳು ಅಪವಿತ್ರವಾಗುತ್ತಿರಲಿಲ್ಲ ಎಂದರು. ಭಾರತದಲ್ಲಿ, ಬಾಂಗಾದಲ್ಲಿ ನಡೆದ ಕೃತ್ಯಗಳೆಲ್ಲವೂ ಭಿನ್ನ ಎನ್ನುವ ಮನಃಸ್ಥಿತಿ ಇದ್ದರೆ ಅದು ಭ್ರಮೆ ಎಂದರು.
ಹೇಳಿಕೆಯನ್ನು ಆಕ್ಷೇಪಿಸಿರುವ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಬಾಬರ್‌ನ ಕಾಲಕ್ಕೂ ಪ್ರಜಾಪ್ರಭುತ್ವದ ಕಾಲಕ್ಕೂ ತಾಳೆಯೇ ಇಲ್ಲ. ಇಂಥ ಹೇಳಿಕೆಗಳು ಸಿಎಂಗೆ ಶೋಭೆ ತರದು ಎಂದು ಟೀಕಿಸಿವೆ.