Advertisement

ವಿಧೇಯಕ ಪ್ರತಿಷ್ಠೆಯಲ್ಲ, ಕಾಯ್ದೆ ಬಗ್ಗೆ ಭಯ ಹುಟ್ಟಿಸಲಾಗ್ತಿದೆ…

01:47 PM Nov 16, 2017 | Sharanya Alva |

ಬೆಂಗಳೂರು:ವೈದ್ಯರ ಮುಷ್ಕರದಲ್ಲಿ ನಾನು ರಾಜಕೀಯ ಬೆರೆಸುತ್ತಿಲ್ಲ. ಆದರೆ ವಿಧೇಯಕವನ್ನು ನಾವು ಸದನದಲ್ಲಿ ಇನ್ನೂ ಮಂಡಿಸಿಲ್ಲ. ಅದಾಗಲೇ ಕಾಯ್ದೆ ಜಾರಿ ಬಗ್ಗೆ ಸತ್ಯಾಂಶ ಹೇಳದೆ, ಸುಳ್ಳು ಸುದ್ದಿ ಹಬ್ಬಿಸಿ ಭಯವನ್ನು ಬಿತ್ತುತ್ತಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.

Advertisement

ರಾಜ್ಯ ಸರ್ಕಾರ ಮತ್ತು ಖಾಸಗಿ ವೈದ್ಯರ ಜಟಾಪಟಿ ಮೂರನೇ ದಿನ ಪೂರೈಸಿದ್ದು, ಸೂಕ್ತ ಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ನರಳಾಡುತ್ತಿದ್ದರೆ, ಮತ್ತೊಂದೆಡೆ ಮುಷ್ಕರದ ಬಗ್ಗೆ ಸಂಜೆಯೊಳಗೆ ಅಂತಿಮ ನಿರ್ಧಾರಕ್ಕೆ ಬರುವಂತೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವ ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಮಾತನಾಡಿದರು.

ಈ ಕಾಯ್ದೆ ಜಾರಿ ಬಗ್ಗೆ ನನಗೆ ಯಾವುದೇ ಪ್ರತಿಷ್ಠೆಯನ್ನು ಹೊಂದಿಲ್ಲ. ಈ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚೆ ಮಾಡೋಣ. ಹಾಗಂತ ಶಾಸನವನ್ನೇ ಮಾಡಬೇಡಿ, ಚರ್ಚೆಯನ್ನೇ ಮಾಡಬೇಡಿ ಎಂದು ಹೇಳಿದರೆ ನಾನ್ ಏನ್ ಉತ್ತರ ಹೇಳ್ಲಿ ಎಂದರು.

ಭಯ ಹುಟ್ಟಿಸಲಾಗ್ತಿದೆ:

ನಾವು ವೈದ್ಯರನ್ನು ಜೈಲಿಗೆ ಕಳುಹಿಸುವ ಕಾಯ್ದೆ ಜಾರಿ ಮಾಡುತ್ತಿಲ್ಲ. ಈ ಮಸೂದೆ ಪಾಸಾದ್ರೆ ನಿಮ್ಮನ್ನು(ವೈದ್ಯರನ್ನು) ಜೈಲಿಗೆ ಕಳುಹಿಸುತ್ತಾರೆ ಎಂಬ ಭಯವನ್ನು ಕೆಲವರು ಬಿತ್ತುತ್ತಿದ್ದಾರೆ. ನಾವು ಎಂದಿಗೂ ಜನವಿರೋಧಿ ನಿರ್ಧಾರ ಕೈಗೊಳ್ಳುವುದಿಲ್ಲ. ನಾನು ವೈದ್ಯರ ವಿರುದ್ಧವೂ ಅಲ್ಲ, ವೈದ್ಯ ವೃತ್ತಿಯ ವಿರುದ್ಧವೂ ಇಲ್ಲ. ವೈದ್ಯರ ಮುಷ್ಕರ, ವಿಧೇಯಕದ ಬಗ್ಗೆ ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

Advertisement

ವಿಧೇಯಕದ ವಿಚಾರದಲ್ಲಿ ನನಗೆ ಯಾವುದೇ ಪ್ರತಿಷ್ಠೆ ಇಲ್ಲ, ನಾನು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ವಿಧಾನಸಭೆಗೆ ಕಾಲಿಟ್ಟವನು. ನಾನು ಶುದ್ಧಹಸ್ತನಾಗಿ ಸದನಕ್ಕೆ ಕಾಲಿಟ್ಟವನು, ಹಾಗಾಗಿ ಇಲ್ಲಿಂದ(ವಿಧಾನಸಭೆ) ನಿಷ್ಕಂಳಕನಾಗಿ ಹೊರಹೋಗಬೇಕೆಂಬುದು ನನ್ನ ಇಚ್ಚೆಯಾಗಿದೆ ಎಂದರು.

ರಾಜೀನಾಮೆ ಕೊಡಲು ಮಂತ್ರಿಯಾಗಿಲ್ಲ:

ರಮೇಶ್ ಕುಮಾರ್ ಅವರು ರಾಜೀನಾಮೆ ಕೊಡಬೇಕೆಂದು ವಿಪಕ್ಷದವರು ಹೇಳುತ್ತಿದ್ದಾರೆ. ನಾನು ರಾಜೀನಾಮೆ ಕೊಡಲು ಮಂತ್ರಿಯಾಗಿಲ್ಲ. ನನ್ನ ಜತೆ ಸರ್ಕಾರವಿದೆ, ಪಕ್ಷದ ಮುಖಂಡರಿದ್ದಾರೆ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಸಭಾತ್ಯಾಗ:

ವೈದ್ಯರ ಮುಷ್ಕರದ ಬಗ್ಗೆ ಸಚಿವ ರಮೇಶ್ ಕುಮಾರ್ ಅವರು ನೀಡಿದ ಪ್ರತಿಕ್ರಿಯೆಯಿಂದ ಬಿಜೆಪಿ ಶಾಸಕರು ಅಸಮಾಧಾನವ್ಯಕ್ತಪಡಿಸಿದರು. ಬಳಿಕ ಸಭಾತ್ಯಾಗ ನಡೆಸಿ, ಕಲಾಪದಿಂದ ಹೊರನಡೆದರು.

Advertisement

Udayavani is now on Telegram. Click here to join our channel and stay updated with the latest news.

Next