Advertisement

ಡ್ರಾಪ್‌ ನೆಪದಲ್ಲಿ ಪ್ರಯಾಣಿಕರ ರಾಬರಿ

12:15 AM Nov 12, 2019 | Lakshmi GovindaRaju |

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ರಾಬರಿ, ಸುಲಿಗೆ ಮಾಡುತ್ತಿದ್ದ ಒಬ್ಬ ಕಾನೂನು ಸಂಘರ್ಷಕ್ಕೊಳಗಾದವ ಸೇರಿ ನಾಲ್ವರು ಆರೋಪಿಗಳು ಆರ್‌.ಆರ್‌.ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬ್ಯಾಟರಾಯನಪುರದ ಸಂದೀಪ್‌ (27), ಮನುಕುಮಾರ್‌ (27), ಶ್ರೀನಗರದ ಅನುಕುಮಾರ್‌ (27) ಹಾಗೂ ಗಿರಿನಗರದ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾವನನ್ನು ಬಂಧಿಸಲಾಗಿದೆ. ಅವರಿಂದ 16 ಗ್ರಾಂ. ಚಿನ್ನದ ಉಂಗುರ, ಒಂದು ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಟೆಂಪೋ ಟ್ರಾವೆಲರ್‌, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ನ.3ರಂದು ತಡರಾತ್ರಿ 12.30ರಲ್ಲಿ ಅನ್ನಪೂರ್ಣೇಶ್ವರಿ ನಗರ ನಿವಾಸಿ ಗಂಗಾಧರಯ್ಯ ಎಂಬವರು ತುಮಕೂರಿನಿಂದ ಬಂದು ಗೊರಗುಂಟೆಪಾಳ್ಯದಲ್ಲಿ ಇಳಿದಿದ್ದರು. ಅಲ್ಲಿಂದ ಅನ್ನಪೂರ್ಣೇಶ್ವರಿ ನಗರದ ಮನೆಗೆ ಹೋಗಲು ರಾಜಕುಮಾರ್‌ ಸಮಾಧಿ ರಸ್ತೆಯಲ್ಲಿ ವಾಹನಗಳಿಗಾಗಿ ಕಾಯುತ್ತಿದ್ದರು. ಈ ವೇಳೆ ಟಿಟಿ ವಾಹನದಲ್ಲಿ ಸ್ಥಳಕ್ಕೆ ಬಂದ ಆರೋಪಿಗಳು, ಡ್ರಾಪ್‌ ಕೊಡುವುದಾಗಿ ಗಂಗಾಧರಯ್ಯ ಅವರನ್ನು ಹತ್ತಿಸಿಕೊಂಡಿದ್ದಾರೆ.

ಟಿಟಿಯಲ್ಲಿದ್ದ ಇತರೆ ಪ್ರಯಾಣಿಕರನ್ನು ಮಾರ್ಗ ಮಧ್ಯೆ ಇಳಿಸಿದ್ದಾರೆ. ನಂತರ ಕೊನೆ ಪ್ರಯಾಣಿಕರಾಗಿದ್ದ ಗಂಗಾಧರಯ್ಯ ಅವರಿಗೆ ಮಾರಕಾಸ್ತ್ರ ತೋರಿಸಿ ಚಿನ್ನದ ಉಂಗುರ, ಡೆಬಿಟ್‌ ಕಾರ್ಡ್‌ ಹಾಗೂ ಮೊಬೈಲ್‌ ಕಸಿದುಕೊಂಡಿದ್ದಾರೆ. ಅಲ್ಲದೆ, ಹೊಸಕೆರೆಹಳ್ಳಿ ಬಳಿಯ ಎಟಿಎಂ ಕೇಂದ್ರಕ್ಕೆ ಕರೆದೊಯ್ದು 200 ರೂ. ಡ್ರಾ ಮಾಡಿಸಿದ್ದರು. ಬಳಿಕ ಅದೇ ವಾಹನದಲ್ಲಿ ಕೃಷ್ಣಪ್ಪ ಲೇಔಟ್‌ನ ರಸ್ತೆ ಬದಿ ತಳ್ಳಿ ಪರಾರಿಯಾಗಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್‌ ಬಾನೋತ್‌ ಹೇಳಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್‌.ಆರ್‌.ನಗರ ಪೊಲೀಸರು, ರಸ್ತೆ ಬದಿಯ ಸಿಸಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸಿ, ವಾಹನದ ನಂಬರ್‌ ಗುರುತಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

ಮಾನವೀಯತೆ ಮೆರೆದ ಕ್ಯಾಬ್‌ ಚಾಲಕ: ಆರೋಪಿಗಳ ಕೃತ್ಯದಿಂದ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದ ಗಂಗಾಧರಯ್ಯ ಗಾಬರಿಗೊಂಡು ಕೃಷ್ಣಪ್ಪ ಲೇಔಟ್‌ನ ರಸ್ತೆ ಬದಿ ನಿಂತಿದ್ದರು. ಅವರನ್ನು ಗಮನಿಸಿದ ಕ್ಯಾಬ್‌ ಚಾಲಕರೊಬ್ಬರು ವಿಚಾರಿಸಿ, ಘಟನೆ ಮಾಹಿತಿ ಪಡೆದುಕೊಂಡು, ನಂತರ 50 ರೂ. ಕೊಟ್ಟು ಆಟೋ ನಿಲ್ದಾಣಕ್ಕೆ ಕರೆದೊಯ್ದು ಆಟೋ ಚಾಲಕಕರಿಗೆ ವಿಚಾರ ತಿಳಿಸಿ ಅವರ ಮೂಲಕ ಗಂಗಾಧರಯ್ಯ ಅವರನ್ನು ಮನೆಗೆ ತಲುಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ಪುತ್ರಿ: ಘಟನೆ ಬಳಿಕ ಗಂಗಾಧರಯ್ಯ ಕುಟುಂಬ ಸದಸ್ಯರು ಕೃತ್ಯ ನಡೆದ ದಿನವೇ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ಮಾಡಿದ್ದರು. ಅದರಿಂದ ಅಸಮಾಧಾನಗೊಂಡ ಗಂಗಾಧರಯ್ಯ ಅವರ ಪುತ್ರಿ, ಮರುದಿನ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next