Advertisement
1238ರಲ್ಲಿ ಜನಿಸಿದ ವಾಸುದೇವ 1249ರಲ್ಲಿ ಸೌಮ್ಯ ಸಂವತ್ಸರದಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿ ಶ್ರೀ ಪೂರ್ಣಪ್ರಜ್ಞ ಎನಿಸಿದರು. ವೇದಾಂತ ಸಾಮ್ರಾಜ್ಯದ ಅಧಿಪತಿಯಾಗಿ ಶ್ರೀ ಆನಂದತೀರ್ಥ ಎನಿಸಿದರು. ಅವರು ಸ್ವಯಂ ಆಗಿ ಇರಿಸಿ ಕೊಂಡ ಕಾವ್ಯನಾಮ ಮಧ್ವ. ಶ್ರೀ ಅಚ್ಯುತಪ್ರಜ್ಞರು ಸನ್ಯಾಸಾಶ್ರಮ ದೀಕ್ಷೆ ನೀಡಿ “ಪೂರ್ಣಪ್ರಜ್ಞ’ರೆಂಬ ಹೆಸರು ನೀಡಿದರು. ಆಗ ವಾಸುದೇವನಿಗೆ 11-12 ವರ್ಷ. ಮಧ್ವಾಚಾರ್ಯರು (1238-1317) ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಎರಡೆರಡು ತಿಂಗಳ ಅವಧಿ ಸರದಿ ಪೂಜೆಯ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇದು 1522ರ ವರೆಗೆ ನಡೆಯಿತು.
Related Articles
Advertisement
ಲಕ್ಷಾಭರಣದ ಹರಕೆ: ತಾಯಿ ಸರಸ್ವತಿ ಪುತ್ರಸಂತಾನವಾದರೆ ದೇವರಿಗೆ ಲಕ್ಷಾಭರಣ ಸಮರ್ಪಿಸುವುದಾಗಿ ಹರಕೆ ಹೇಳಿಕೊಳ್ಳುತ್ತಾರೆ. ಅನಂತರ ಪುತ್ರ ಸಂತಾನವಾಯಿತು, ಸನ್ಯಾಸಾಶ್ರಮವೂ ಆಯಿತು. ಬಡತಾಯಿ ಲಕ್ಷಾಭರಣ ಹರಕೆಯ ವಿಚಾರವನ್ನು ಆಧ್ಯಾತ್ಮಿಕ ಸಿರಿವಂತ ಶ್ರೀ ವಾದಿರಾಜರಿಗೆ ತಿಳಿಸಿದಾಗ ವೇದವ್ಯಾಸರ ಆದೇಶದಂತೆ ಲಕ್ಷ ಶ್ಲೋಕಗಳಿರುವ ಮಹಾಭಾರತದ ಲಕ್ಷ ಕ್ಲಿಷ್ಟಕರ ಶಬ್ದಗಳಿಗೆ ಅರ್ಥ ಸಹಿತ ವಿವರಣೆ ನೀಡಿದ “ಲಕ್ಷಾಲಂಕಾರ’ ಎಂಬ ಗ್ರಂಥವನ್ನು ಬರೆದು ಪೂರೈಸಿ “ತಾಯಿ ನಿನ್ನ ಹರಕೆ ತೀರಿತು’ ಎನ್ನುತ್ತಾರೆ. ಇದರ ಸಮರ್ಪಣೆಯನ್ನು ವೇದವ್ಯಾಸರು ಮತ್ತು ಮಧ್ವರಿಗೆ ನಡೆಸಿದ್ದು ಉತ್ತರ ಬದರಿಯಲ್ಲಿ. (“ವಾದಿರಾಜ ಗುರುಚರಿತೆ’ದಲ್ಲಿ ಉಲ್ಲೇಖ). ಉತ್ತರ ಬದರಿಗೆ ಯಾರೂ ಹೋಗಲು ಸಾಧ್ಯವಿಲ್ಲ. ಉತ್ತರ ಬದರಿಗೆ ತೆರಳಿ ವೇದವ್ಯಾಸರು-ಮಧ್ವಾಚಾರ್ಯರನ್ನು ಕಂಡ ಏಕೈಕ ಮಠಾಧಿಪತಿ ವಾದಿರಾಜರು ಎಂಬ ಹಿರಿಮೆ ಇದೆ.
ಪರ್ಯಾಯ ಅನುಕ್ರಮಣಿಕೆ: ಹೀಗೆ ಶ್ರೀಮಧ್ವಾಚಾರ್ಯರ ಅಣತಿ ಪಡೆದು ಆರಂಭಿಸಿದ ದ್ವೆ„ವಾರ್ಷಿಕ ಪರ್ಯಾಯ ವ್ಯವಸ್ಥೆ ಹಿಂದಿನಂತೆ ದ್ವೆ„ಮಾಸಿಕ ವ್ಯವಸ್ಥೆಯ ಅನುಕ್ರಮಣಿಕೆ ಯಂತೆಯೇ ಮುಂದುವರಿಯಿತು. ಪಲಿಮಾರು ಮಠದಿಂದ ಆರಂಭಗೊಂಡು ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು ಅನಂತರ ಪೇಜಾವರ ಮಠದಲ್ಲಿ ಕೊನೆಗೊಳ್ಳುತ್ತದೆ. ಆಯಾ ಪರಂಪರೆಯ ಆದ್ಯ ಯತಿಗಳ ಆಶ್ರಮ ಜ್ಯೇಷ್ಠತ್ವವನ್ನು ಆಧರಿಸಿ ಇದು ಜಾರಿಗೆ ಬಂದಿದೆ.
ಅಯೋಧ್ಯೆಯ ಆಂಜನೇಯ: ವಾದಿರಾಜ ಸ್ವಾಮಿಗಳು ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಿಂದ ತಂದು ಶ್ರೀಕೃಷ್ಣಮಠ ದಲ್ಲಿ ಆಂಜನೇಯ, ಗರುಡನನ್ನು ಪ್ರತಿಷ್ಠಾಪಿಸಿ ದ್ವೆ„ವಾರ್ಷಿಕ ಪೂಜಾ ವ್ಯವಸ್ಥೆಗೆ ಅವಧಿ ವಿಸ್ತರಿಸಿದರು. ಈ ಆಂಜನೇಯ ಎಷ್ಟು ಪ್ರಭಾವಶಾಲಿ ಎಂದರೆ ಇದುವರೆಗೆ ಇದರ ಪುನಃಪ್ರತಿಷ್ಠೆ ಆಗಲಿಲ್ಲ. ಆತನೇ ಇಲ್ಲಿನ ಕೇಂದ್ರ ಶಕ್ತಿ ಎಂಬ ನಂಬಿಕೆ ಇದೆ.
1522ರಿಂದ 2022ರ ವರೆಗೆ: 1522ರಲ್ಲಿ ದ್ವೈವಾರ್ಷಿಕ ಪೂಜಾ ವ್ಯವಸ್ಥೆಯನ್ನು ವಾದಿರಾಜರು ಆರಂಭಿಸಿದರು. ಅನುಕ್ರಮಣಿಕೆಯಂತೆ ಹತ್ತು ವರ್ಷಗಳ ಬಳಿಕ 1532ರಲ್ಲಿ ಸ್ವಯಂ ವಾದಿರಾಜರ ಪರ್ಯಾಯ ಬಂತು. ಅನಂತರ ಅವರು 1548-49, 1564-65, 1580-81ರಲ್ಲಿ ಪರ್ಯಾಯ ಪೂಜೆ ನಡೆಸಿದರು. ತಾವೇ ಸ್ವತಃ ಪ್ರಥಮ ದ್ವೆ„ವಾರ್ಷಿಕ ಪರ್ಯಾಯ ಪೀಠವೇರುವಾಗ ಅವರಿಗೆ ಸುಮಾರು 52 ವರ್ಷ, ನಾಲ್ಕನೆಯ ಪರ್ಯಾಯದಲ್ಲಿ 100 ವರ್ಷವಾಗಿತ್ತು. ಐದನೆಯ ಪರ್ಯಾಯದ 1596-97ರ ಅವಧಿಯಲ್ಲಿ ಶಿಷ್ಯ ಶ್ರೀ ವೇದವೇದ್ಯತೀರ್ಥರನ್ನು ಪೀಠದಲ್ಲಿ ಕುಳ್ಳಿರಿಸಿ ಸೋಂದಾ ಕ್ಷೇತ್ರದಲ್ಲಿ ತಾವು ಪರ್ಯಾಯವನ್ನು ನಡೆಸಿದರು. ಆಗ ವಾದಿರಾಜರಿಗೆ ಸುಮಾರು 116 ವರ್ಷ. 120ನೆಯ ವಯಸ್ಸಿನಲ್ಲಿ ಅವರು ವೃಂದಾವನಸ್ಥರಾದರು.
1522ರಿಂದ ಆರಂಭಗೊಂಡ ಪರ್ಯಾಯ ವ್ಯವಸ್ಥೆ ಪ್ರತೀ 16 ವರ್ಷಗಳಿಗೊಮ್ಮೆ ಒಂದೊಂದೇ ಚಕ್ರವನ್ನು ಹಾದು 32ನೆಯ ಚಕ್ರದಲ್ಲಿದೆ. 32ನೆಯ ಚಕ್ರದಲ್ಲಿ ಎರಡನೆಯದಾದ 250ನೆಯ ಅದಮಾರು ಪರ್ಯಾಯ ಮುಗಿದು ಮೂರನೆಯದಾದ 251ನೆಯ ಪರ್ಯಾಯ ಆರಂಭಗೊಳ್ಳುತ್ತಿದೆ. ಈಗ 501ನೇ ವರ್ಷಕ್ಕೆ ಪದಾರ್ಪಣೆಯಾಗುತ್ತಿದೆ.ಅದಮಾರು ಮಠದ 31ನೆಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನಿರ್ಗಮನ ಪೀಠಾಧೀಶರಾದರೆ, ಕೃಷ್ಣಾಪುರ ಮಠದ 34ನೆಯ ಯತಿ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಗಮನ ಪೀಠಾಧೀಶರು. ಅನಂತದಿಂದ ಅನಂತದ ವರೆಗೆ..
ಮಧ್ವಾಚಾರ್ಯರು ಜನಿಸಿದ ಪಾಜಕ ಕ್ಷೇತ್ರದಲ್ಲಿರುವುದು ಅನಂತಪದ್ಮನಾಭನ ಮಂದಿರ. ಅವರ ತಂದೆ ಪುತ್ರಪ್ರಾಪ್ತಿಗಾಗಿ ಬೇಡಿದ್ದು ಉಡುಪಿಯ ಅನಂತೇಶ್ವರನನ್ನು. ಅನಂತೇಶ್ವರನ ಸನ್ನಿಧಿಯಲ್ಲಿ ಮಕರಸಂಕ್ರಾಂತಿ ಉತ್ಸವ ನಡೆಯುವಾಗ ಈಗಲೂ ಪುತ್ರಪ್ರಾಪ್ತಿಯ ಕಾರಣಿಕ ಇಲ್ಲಿ ನಡೆಯುತ್ತಿದೆ ಎಂಬ ನಂಬಿಕೆ ಇದೆ. ಅಂತಿಮ ದಿನ ಆಚಾರ್ಯ ಮಧ್ವರು ಐತರೇಯ ಉಪನಿಷತ್ತಿನ ಪಾಠವನ್ನು ಹೇಳಿದ್ದು ಅನಂತೇಶ್ವರನ ಸನ್ನಿಧಿಯಲ್ಲಿಯೇ. ಕೊನೆಗೆ ನೆಲೆಸಿದ್ದೂ ಅನಂತಮಠ ಎಂದು ಹೆಸರು ಇರುವ ಬದರೀಕ್ಷೇತ್ರದಲ್ಲಿ. – ಸ್ವಾಮಿ