ಹೊಸದಿಲ್ಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ)ಗಳ ಕಾರ್ಯಚಟುವಟಿಕೆಗಳಲ್ಲಿ ಸರಕಾರದ ಹಸ್ತಕ್ಷೇಪವನ್ನು ತಪ್ಪಿಸುವಂತೆ ಅಂತಹ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ವಿಧೇಯಕಕ್ಕೆ ಲೋಕಸಭೆಯಲ್ಲಿ ಶುಕ್ರವಾರ ಅಂಗೀಕಾರ ದೊರೆತಿದೆ. ಅದರಂತೆ, ಇನ್ನು ಮುಂದೆ ದೇಶದ ಎಲ್ಲ ಐಐಎಂಗಳು ತಮ್ಮ ನಿರ್ದೇಶಕರ ನೇಮಕ, ಬೋಧಕ ಸಿಬ್ಬಂದಿ ನೇಮಕ, ಸ್ನಾತಕೋತ್ತರ ಡಿಪ್ಲೋಮಾ ಬದಲಿಗೆ ಪದವಿಯನ್ನು ಪ್ರದಾನ ಮಾಡುವುದು ಸೇರಿದಂತೆ ವಿವಿಧ ಅಧಿಕಾರಗಳನ್ನು ಪಡೆಯಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು, ಈ ವಿಧೇಯಕವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಎಂಐಟಿ ಮತ್ತು ಹಾರ್ವರ್ಡ್‌ನಂತಹ ಶಿಕ್ಷಣ ಸಂಸ್ಥೆಗಳು ವಿಶ್ವದರ್ಜೆಗೇರಲು ಅವುಗಳ ಮುಕ್ತತೆ ಮತ್ತು ಸ್ವಾಯತ್ತತೆ ಕಾರಣ ಎನ್ನುವ ಮೂಲಕ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ 22 ಮಂದಿ ಸದಸ್ಯರು ಈ ವಿಧೇಯಕದ ಪರವಾಗಿ ಮಾತನಾಡಿದ್ದು ವಿಶೇಷವಾಗಿತ್ತು.