ಪ್ಯಾರಿಸ್: ತೂಕ ಹೆಚ್ಚಾದ ಕಾರಣದಿಂದ ಫೈನಲ್ ಪಂದ್ಯದಿಂದ ಭಾರತೀಯ ಕುಸ್ತಿಪಟು ವಿನೀಶ್ ಫೋಗಾಟ್ ಅನರ್ಹಗೊಂಡ ಬಳಿಕ ಮತ್ತೋರ್ವ ಕುಸ್ತಿಪಟು ಭಾರತಕ್ಕೆ ಮುಜುಗರ ತರುವಂತಹ ಕೆಲಸ ಮಾಡಿದ್ದಾರೆ. 53 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಂತಿಮ್ ಪಂಘಾಲ್ ಅವರನ್ನು ಕ್ರೀಡಾಗ್ರಾಮದಿಂದ ಹೊರಹಾಕಲು ಒಲಿಂಪಿಕ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರ ಸಮಯದಲ್ಲಿ ಒಲಂಪಿಕ್ ಕ್ರೀಡಾ ಗ್ರಾಮವನ್ನು ಆಕೆಯ ಸಹೋದರಿ ನಿಶಾ ಭಾರತೀಯ ಕುಸ್ತಿಪಟುಗಳ ಮಾನ್ಯತಾ ಕಾರ್ಡ್ ಬಳಸಿ ಪ್ರವೇಶ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ನಿಶಾ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ನಂತರ ಕುಸ್ತಿಪಟು ಆಂತಿಮ್ ಪಂಘಾಲ್ ಮತ್ತು ಅವರ ಪರಿವಾರವನ್ನು ಪ್ಯಾರಿಸ್ ನಿಂದ ಗಡೀಪಾರು ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಪೊಲೀಸರು ನಿಶಾಳನ್ನು ವಿಚಾರಣೆಗೆ ಒಳಪಡಿಸಿದರು ಆದರೆ ಸ್ವಲ್ಪ ಸಮಯದ ನಂತರ ಆಕೆಯನ್ನು ಬಿಡುಗಡೆ ಮಾಡಲಾಯಿತು. ಆಂತಿಮ್ ಅವರ ಸಂಪೂರ್ಣ ಪರಿವಾರವನ್ನು ಹೊರಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಲ್ಲದೆ ಘಟನೆಯ ನಂತರ ಅವರ ಮಾನ್ಯತೆಯನ್ನು ಸಹ ರದ್ದುಗೊಳಿಸಲಾಗಿದೆ.
ಮಹಿಳೆಯರ 53 ಕೆಜಿ ವಿಭಾಗದಲ್ಲಿ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ ಆಡಿದ್ದ ಅಂತಿಮ್ ಪಂಘಾಲ್ 0-10 ಅಂತರದ ಅವಮಾನಕರ ಸೋಲಿಗೆ ತುತ್ತಾಗಿದ್ದರು.
“ಶಿಸ್ತು ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು ಗಮನಕ್ಕೆ ತಂದ ನಂತರ ಕುಸ್ತಿಪಟು ಆಂಟಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ಹಿಂದೆ ಕರೆಯಲು ನಿರ್ಧರಿಸಿದೆ” ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಪಂದ್ಯದಲ್ಲಿ ಸೋತ ಬಳಿಕ ಅಂತಿಮ ಅವರು ಕೋಚ್ ಗಳೊಂದಿಗೆ ಹೋಟೆಲ್ ಗೆ ತೆರಳಿದ್ದರು. ಈ ವೇಳೆ ಅವರ ವಸ್ತುಗಳನ್ನು ತರಲೆಂದು ಸಹೋದರಿ ನಿಶಾ ಅವರನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಿದ್ದಾರೆ. ಆಕೆಯ ಸಹೋದರಿ ಗ್ರಾಮವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆದರೆ, ಹಿಂದುರುಗುವಾಗ ಭದ್ರತಾ ಅಧಿಕಾರಿಯ ಕೈಗೆ ಸಿಕ್ಕಿಬಿದ್ದರು.
ಆಕೆಯ ಹೇಳಿಕೆಯನ್ನು ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು. ಬಳಿಕ 19 ವರ್ಷದ ಜೂನಿಯರ್ ವಿಶ್ವ ಚಾಂಪಿಯನ್ ಆಂಟಿಮ್ ಅವರ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಕರೆದರು.
ಅಷ್ಟೇ ಅಲ್ಲದೆ, ಆಂತಿಮ್ ಅವರ ವೈಯಕ್ತಿಕ ಸಹಾಯಕ ಸಿಬ್ಬಂದಿಗಳಾದ ವಿಕಾಸ್ ಮತ್ತು ಭಗತ್ ಅವರು ಕ್ಯಾಬ್ ನಲ್ಲಿ ಅಮಲೇರಿದ ಸ್ಥಿತಿಯಲ್ಲಿ ಪ್ರಯಾಣಿಸಿದ್ದಾರೆ. ಆದರೆ ಹಣ ಪಾವತಿಸಲು ನಿರಾಕರಿಸಿದ್ದಾರೆ. ಇದು ಕೂಡಾ ಪೊಲೀಸ್ ಠಾಣೆ ಮೆಟ್ಟಿಲೇರಿದೆ.